ADVERTISEMENT

ವಿಮಾನ ದುರಂತ: ಎಂಜಿನ್‌ ವೈಫಲ್ಯದಿಂದ ದುರಂತ?

ಪಿಟಿಐ
Published 13 ಜೂನ್ 2025, 18:59 IST
Last Updated 13 ಜೂನ್ 2025, 18:59 IST
ಏರ್‌ ಇಂಡಿಯಾ ವಿಮಾನ ದುರಂತ
ಏರ್‌ ಇಂಡಿಯಾ ವಿಮಾನ ದುರಂತ   

ಮುಂಬೈ: ಸುಧಾರಿತಾ ಸುರಕ್ಷತಾ ತಂತ್ರಜ್ಞಾನ ಹೊಂದಿರುವ ಬೋಯಿಂಗ್‌ ಡ್ರೀಮ್‌ಲೈನರ್‌ 787 ವಿಮಾನವು ಟೇಕಾಫ್‌ ಆದ 32 ಸೆಕೆಂಡ್‌ಗಳಲ್ಲೇ ಪತನಗೊಳ್ಳಲು ಕಾರಣ ಏನು ಎನ್ನುವುದು ವಿಮಾನಯಾನ ತಜ್ಞರನ್ನು ಕಾಡುತ್ತಿದೆ.  

ದುರಂತದ ಬಗ್ಗೆ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ವಿಮಾನದ ಅವಳಿ ಎಂಜಿನ್‌ಗಳ ವೈಫಲ್ಯದಿಂದ ವಿಮಾನ ಪತನಗೊಂಡಿದೆ ಎಂದು ಹೇಳುವುದೂ ಕಷ್ಟ ಎನ್ನುತ್ತಿದ್ದಾರೆ ತಜ್ಞರು.  

ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 242 ಮಂದಿಯನ್ನು ಹೊತ್ತ ವಿಮಾನವು ಅಹಮದಾಬಾದ್‌ನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪರಿಧಿಯನ್ನು ದಾಟಿ  1.5 ಕಿ.ಮೀ. ಕ್ರಮಿಸುತ್ತಿದ್ದಂತೆ ಪತನಗೊಂಡಿದೆ. ಟೇಕಾಫ್‌ ಆದ ಬೆನ್ನಲ್ಲೇ ಪೈಲಟ್‌ ತುರ್ತು ಸಂದೇಶ ರವಾನಿಸಿದ್ದರು. ಅಷ್ಟರಲ್ಲಾಗಲೇ ದುರಂತ ಸಂಭವಿಸಿದೆ.  

ADVERTISEMENT

‘ದುರಂತಕ್ಕೆ ಸಂಬಂಧಿಸಿದಂತೆ ವೃತ್ತಿಪರ ತನಿಖಾಧಿಕಾರಿಗಳಿಂದ ತನಿಖೆ ನಡೆಸಬೇಕು. ವಿಮಾನ ಪತನಗೊಳ್ಳಲು ಕಾರಣ ಏನು ಎನ್ನುವುದರ ಬಗ್ಗೆ ಊಹಾಪೋಹಗಳನ್ನು ಹರಡುವುದು ಬೇಡ’ ಎಂದು ಷಿಕಾಗೊದಲ್ಲಿರುವ ಕ್ಲಿಫರ್ಡ್‌ ಕಾನೂನು ಕಚೇರಿಯ ಸ್ಥಾಪಕ,  ಇಥಿಯೋಪಿಯಾದಲ್ಲಿ ಆರು ವರ್ಷಗಳ ಹಿಂದೆ 157 ಪ್ರಯಾಣಿಕರನ್ನು ಬಲಿ ಪಡೆದ, ಬೋಯಿಂಗ್‌ 737 ವಿಮಾನ ದುರಂತದ ತನಿಖಾ ಸಲಹೆಗಾರ ರಾಬರ್ಟ್‌ ಎ. ಕ್ಲಿಫರ್ಡ್‌ ಹೇಳಿದ್ದಾರೆ. 

‘ದತ್ತಾಂಶಗಳನ್ನು ವಿಶ್ಲೇಷಿಸಿದಾಗ ವಿಮಾನವು 625 ಅಡಿ ಮೇಲೇರಿದಾಗ, ಪ್ರತಿ ನಿಮಿಷಕ್ಕೆ ವಿಮಾನದ ವೇಗ (ಲಂಬ) 475 ಅಡಿ ಇತ್ತು’ ಎಂದು ಏರ್‌ಟ್ರಾಫಿಕ್ ಮೇಲೆ ನಿಗಾ ವಹಿಸುವ ‘ಫ್ಲೈಟ್‌ ರಡಾರ್‌ 24’  ಸಂಸ್ಥೆ ಹೇಳಿದೆ. 

ವಿಮಾನದಲ್ಲಿ ಎಲೆಕ್ಟ್ರಿಕಲ್‌ ಉಪಕರಣಗಳಂತೆ ಸಾಕಷ್ಟು ಸಂಖ್ಯೆಯಲ್ಲಿ ವಾಯುಚಾಲಿತ ಉಪಕರಣಗಳೂ ಇವೆ. ಇವುಗಳ ಕಾರ್ಯನಿರ್ವಹಣೆಯಲ್ಲಿ ಅಡ್ಡಿ ಉಂಟಾದರೆ ಅದು ಕೂಡ ಅಪಘಾತಕ್ಕೆ ಕಾರಣವಾಗಬಲ್ಲದು’ ಎಂದು ತಜ್ಞರು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.