ಏರ್ ಇಂಡಿಯಾ AI171 ವಿಮಾನ ಕಟ್ಟಡಕ್ಕೆ ಅಪ್ಪಳಿಸಿದ ದೃಶ್ಯ; ಕಾಕ್‌ಪಿಟ್‌ನಲ್ಲಿ ಇಂಧನ ಕಟ್‌ಆಫ್ ಮತ್ತು ರನ್ ಮಾಡುವ ಸಾಧನ
ನವದೆಹಲಿ: ಗುಜರಾತ್‌ನ ಅಹಮದಾಬಾದ್ ಬಳಿ ಜೂನ್ 12ರಂದು ಅಪಘಾತಕ್ಕೀಡಾಗಿ 260 ಜನರ ಸಾವಿಗೆ ಕಾರಣವಾದ ಏರ್‌ಇಂಡಿಯಾದ (AI171) ಬೋಯಿಂಗ್ 787–8 ಡ್ರೀಮ್‌ಲೈನರ್ ದುರಂತದ ಪ್ರಾಥಮಿಕ ವರದಿ ಬಿಡುಗಡೆಗೊಂಡಿದ್ದು, ಪ್ರಮುಖ ಅಂಶಗಳು ಇದರಿಂದ ಬಹಿರಂಗಗೊಂಡಿವೆ.
ವಿಮಾನ ಅಪಘಾತ ತನಿಖಾ ಸಂಸ್ಥೆ (AAIB) ವರದಿಯಲ್ಲಿ ತಾಂತ್ರಿಕ ದೋಶ, ಕಾಕ್‌ಪಿಟ್‌ನಲ್ಲಿ ಪೈಲೆಟ್‌ಗಳ ನಡುವಿನ ಗೊಂದಲ, ಮರಳಿ ಹತೋಟಿಗೆ ತರುವ ಪ್ರಯತ್ನದಲ್ಲಿ ವಿಫಲ ಸೇರಿದಂತೆ ಹಲವು ಪ್ರಮುಖ ಅಂಶಗಳು ದಾಖಲಾಗಿವೆ.
ದುರಂತ ಸ್ಥಳದಲ್ಲಿ ಪತ್ತೆಯಾದ ವಿಮಾನದ ಕಪ್ಪು ಪೆಟ್ಟಿಗೆಯನ್ನು ಸಂಗ್ರಹಿಸಿದ ತನಿಖಾ ಸಂಸ್ಥೆ, ಅದರ ವಿಶ್ಲೇಷಣೆ ನಡೆಸಿತ್ತು. ಅದರ ಪ್ರಮುಖ 15 ಅಂಶಗಳು ಇಲ್ಲಿವೆ.
ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟು 0809 UTC ಎಂಬಲ್ಲಿ ಜೂನ್ 12ರಂದು ಮಧ್ಯಾಹ್ನ 13.39ಕ್ಕೆ ಪತನಗೊಂಡಿತು.
ವಿಮಾನವು ಕಟ್ಟಡಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿತು. ಇದರಿಂದ ಸುಟ್ಟು ಭಸ್ಮವಾಯಿತು. ವಿಮಾನದಲ್ಲಿದ್ದ 12 ಸಿಬ್ಬಂದಿ ಮತ್ತು 229 ಪ್ರಯಾಣಿಕರು ಮೃತಪಟ್ಟರು. ಒಬ್ಬರು ಗಾಯಗೊಂಡರು. ವಿಮಾನ ಪತನಗೊಂಡ ವೈದ್ಯಕೀಯ ಕಾಲೇಜಿನ ಸ್ಥಳದಲ್ಲಿದ್ದ 19 ಜನ ಮೃತಪಟ್ಟಿದ್ದಾರೆ.
ವಿಮಾನದಲ್ಲಿ CAT 'C' ಕನಿಷ್ಠ ಸಾಧನೆಗಳ ಪಟ್ಟಿ ಹೊಂದಿತ್ತು. ಇದರಲ್ಲಿ ವಿಮಾನದ ಡೆಕ್‌ಡೋಡರ್‌ನ ದೃಶ್ಯ ದಾಖಲಿಸುವ ವ್ಯವಸ್ಥೆ, ವಿಮಾನ ನಿಲ್ದಾಣದ ನಕ್ಷೆ, ಕೋರ್ ನೆಟ್‌ವರ್ಕ್ ಮತ್ತು ಎಫ್‌ಡಿ ಪ್ರಿಂಟರ್‌ಗಳಿದ್ದವು. ಇವುಗಳನ್ನು ಜೂನ್ 9ರಂದು ಪರಿಶೀಲಿಸಲಾಗಿತ್ತು. ಇವುಗಳ ಮಾನ್ಯತೆ ಜೂನ್ 19ರವರೆಗೂ ಇತ್ತು. ವಿಮಾನದಲ್ಲಿದ್ದ ನೈಟ್ರೊಜೆನ್ ಕಾರ್ಯಕ್ಷಮತೆಯ ಮಾನ್ಯತೆ ಜೂನ್ 20ರವರೆಗೆ ಇತ್ತು.
ವಿಮಾನ ದುರಂತಕ್ಕೀಡಾಗುವ ಮೊದಲು ಸ್ಥಿತಿ ಸಂದೇಶಕ್ಕಾಗಿ ಪೈಲೆಟ್ ದೋಷ ವರದಿಗೆ (PDR) ನಮೂದಿಸಲಾಗಿತ್ತು. ಇದಕ್ಕೆ ಪೂರಕವಾಗಿ ದೋಷ ನಿವಾರಣೆಯನ್ನು ನಡೆಸಿದ ನಂತರವಷ್ಟೇ ವಿಮಾನ ಹಾರಾಟಕ್ಕೆ ಅನುಮತಿ ನೀಡಲಾಗಿತ್ತು. ಇದನ್ನು ದುರಂತ ನಡೆದ ದಿನ ಮಧ್ಯಾಹ್ನ 12.10ಕ್ಕೆ ನಡೆಸಲಾಗಿದೆ
ಹಾರಾಟಕ್ಕೂ ಮೊದಲು ಬೆಳಿಗ್ಗೆ 11.55ಕ್ಕೆ ವಿಮಾನದಲ್ಲಿ ಪ್ರಯಾಣಿಸಲಿರುವ ಸಿಬ್ಬಂದಿಯ ಉಸಿರಾಟ ತಪಾಸಣೆ ನಡೆಸಲಾಗಿದೆ. ಅವರೆಲ್ಲರೂ ಹಾರಾಟಕ್ಕೆ ಅರ್ಹರು ಎಂದು ಹೇಳಲಾಗಿದೆ
ವಿಮಾನವು ಮಧ್ಯಾಹ್ನ 1.37ಕ್ಕೆ ರನ್ ವೇ 23ರಿಂದ ತನ್ನ ಹಾರಾಟ ಆರಂಭಿಸಿತು.
ಸರಿಯಾಗಿ 1.38ಕ್ಕೆ ನೆಲವನ್ನು ಬಿಟ್ಟು ಆಗಸದೆಡೆಗೆ ನೆಗೆಯಿತು (ಇದಕ್ಕೆ ಪೂರಕವಾದ ಸೆನ್ಸರ್‌ಗಳ ಮಾಹಿತಿ ಲಭ್ಯವಾಗಿದೆ). ಹಾರಾಟಕ್ಕೆ ಅಗತ್ಯವಾದ 180 ನಾಟ್ಸ್ ವೇಗವನ್ನೂ ಪಡೆದುಕೊಂಡಿತು.
ಗರಿಷ್ಠ ವೇಗ ಪಡೆದುಕೊಂಡ ಹೊತ್ತಿಗೆ ಎಂಜಿನ್–1 ಹಾಗೂ ಎಂಜಿನ್–2ಕ್ಕೆ ಇಂಧನ ಪೂರೈಕೆ ಸ್ಥಗಿತಗೊಂಡಿದೆ. ಇದು ‘ರನ್’ ಸ್ಥಿತಿಯಿಂದ ‘ಕಟ್‌ಆಫ್’ ಸ್ಥಿತಿಗೆ ತಲುಪಿದೆ. ಈ ಎರಡೂ ಎಂಜಿನ್‌ಗಳು ಒಂದು ಸೆಕೆಂಡುಗಳ ಅಂತರದಲ್ಲಿ ತಮ್ಮ ಕಾರ್ಯ ಸ್ಥಗಿತಗೊಳಿಸಿವೆ
ಕಾಕ್‌ಪಿಟ್‌ನ ಸಂಭಾಷಣೆಯೂ ಕಪ್ಪು ಪೆಟ್ಟಿಗೆಯಲ್ಲಿ ದಾಖಲಾಗಿದ್ದು, ಎಂಜಿನ್ ತನ್ನ ಕಾರ್ಯ ಸ್ಥಗಿತಗೊಳಿಸಿದ್ದರ ಕುರಿತು ಒಬ್ಬ ಪೈಲೆಟ್ ಮತ್ತೊಬ್ಬರನ್ನು ಕೇಳಿದ್ದಾರೆ. ತಾನು ಹಾಗೆ ಮಾಡಿಲ್ಲ ಎಂದು ಮತ್ತೊಬ್ಬ ಪೈಲೆಟ್ ಉತ್ತರಿಸಿದ್ದಾರೆ.
ವಿಮಾನ ನೆಲವನ್ನು ಬಿಟ್ಟು ಹಾರಿದ ಸಂದರ್ಭದಲ್ಲಿನ ಆರಂಭಿಕ ಆರೋಹಣದಲ್ಲಿ ರ‍್ಯಾಮ್ ಏರ್ ಟರ್ಬೈನ್ (RAT) ಸಿಸಿಟಿವಿ ದೃಶ್ಯದಲ್ಲಿ ಕಾಣಿಸುತ್ತದೆ.
ಎರಡೂ ಎಂಜಿನ್‌ಗಳ (ಎಂಜಿನ್ 1– 1:38:52 ಹಾಗೂ ಎಂಜಿನ್ 2– 1:38:56) ಇಂಧನ ಪೂರೈಕೆ ಸ್ಥಿತಿಯು ಮಧ್ಯಾಹ್ನ 1.38ಕ್ಕೆ ‘ಕಟ್‌ಆಫ್’ ಸ್ಥಿತಿಯಿಂದ ‘ರನ್’ ಸ್ಥಿತಿಗೆ ಮರಳಿ ತರಲಾಗಿದೆ. ಈ ಹೊತ್ತಿಗೆ ಎರಡೂ ಎಂಜಿನ್‌ಗಳ ತಾಪಮಾನ ಏರಿಕೆಯಾಗಿದೆ. ಇದು ವಿಮಾನವನ್ನು ಮರಳಿ ಸಹಜ ಸ್ಥಿತಿಗೆ ತರುವ ಪ್ರಯತ್ನವಾಗಿದೆ.
ಸ್ಥಗಿತಗೊಂಡಿದ್ದ ವಿಮಾನದ ಎಂಜಿನ್–1 ಸಹಜ ಸ್ಥಿತಿಗೆ ಮರಳುತ್ತಿತ್ತು. ಎಂಜಿನ್–2 ಸಹ ತನ್ನ ಕಾರ್ಯಾಚರಣೆ ಆರಂಭಿಸಿತು. ಆದರೆ ಅಗತ್ಯ ವೇಗವನ್ನು ವಿಮಾನಕ್ಕೆ ನೀಡಲು ಅದಕ್ಕೆ ಸಾಧ್ಯವಾಗಲಿಲ್ಲ. ಈ ಹಂತದಲ್ಲಿ ಪದೇ ಪದೇ ಇಂಧನ ಮರು ಪೂರೈಕೆಯ ಯತ್ನ ನಡೆಸಲಾಗಿದೆ.
ಮಧ್ಯಾಹ್ನ 1:39:05ಕ್ಕೆ ‘ಮೇ ಡೇ, ಮೇ ಡೇ, ಮೇ ಡೇ’ ಕರೆಯನ್ನು ಪೈಲೆಟ್ ನೀಡಿರುವುದು ದಾಖಲಾಗಿದೆ. ವಿಮಾನದಲ್ಲಿದ್ದ ರೆಕಾರ್ಡರ್ 1:39:11ಕ್ಕೆ ಸ್ಥಗಿತಗೊಂಡಿದೆ.
ಫ್ರಾಪ್ ಹ್ಯಾಂಡಲ್ ಸರಿಯಾಗಿ 5 ಡಿಗ್ರಿ ಟೇಕ್‌ಆಫ್ ಸ್ಥಿತಿಯಲ್ಲಿದೆ ಮತ್ತು ಲ್ಯಾಂಡಿಂಗ್ ಗೇರ್ ಲಿವರ್ ಡೌನ್ ಸ್ಥಿತಿಯಲ್ಲಿರುವುದು ಘಟನೋತ್ತರ ತನಿಖೆಯ ಸಂದರ್ಭದಲ್ಲಿ ಕಂಡುಬಂದಿದೆ. ಆದರೆ ‘ಥ್ರಸ್ಟ್ ಲಿವರ್’ ಅನುಪಯೋಗ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ದುರಂತ ಸಂಭವಿಸುವವರೆಗೂ ಅದು ಮುಂದಕ್ಕೆ (ಟೇಕ್‌ಆಫ್ ಥ್ರಸ್ಟ್) ಇತ್ತು ಎಂದು ದಾಖಲೆಗಳು ಹೇಳಿವೆ.
ಕಪ್ಪು ಪೆಟ್ಟಿಗೆಯಿಂದ ವಿಮಾನದ ಹಿಂದಿನ 49 ಗಂಟೆಗಳ ಹಾರಾಟದ ಮಾಹಿತಿ ಮತ್ತು 2 ಗಂಟೆಗಳ ಕಾಕ್‌ಪಿಟ್‌ನ ಧ್ವನಿಯನ್ನು ಯಶಸ್ವಿಯಾಗಿ ಸಂಗ್ರಹಿಸಲಾಗಿದೆ. ಅಪಘಾತದಲ್ಲಿ ಕಪ್ಪು ಪೆಟ್ಟಿಗೆಗೆ ಹಾನಿಯಾಗಿತ್ತು. ಸುಲಭವಾಗಿ ಇದರಲ್ಲಿನ ಮಾಹಿತಿ ಸಂಗ್ರಹಿಸುವುದು ಸಾಧ್ಯವಾಗಿರಲಿಲ್ಲ.
ಪ್ರಾಥಮಿಕ ವರದಿಯನ್ನು ಆಧರಿಸಿ ಎಂಜಿನ್ ಹೇಗೆ ಸ್ಥಗಿತಗೊಂಡಿತು ಎಂಬುದರ ಕುರಿತು ನಡೆಯಬೇಕಿರುವ ಕೂಲಂಕಷ ತನಿಖೆಯತ್ತ ಗಮನ ಕೇಂದ್ರೀಕರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.