ಕೆ.ಸಿ. ವೇಣುಗೋಪಾಲ್
(ಪಿಟಿಐ ಚಿತ್ರ)
ನವದೆಹಲಿ: ಭಾನುವಾರ (ಆ. 10) ರಾತ್ರಿ ತಿರುವನಂತಪುರದಿಂದ ದೆಹಲಿಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದಾಗಿ ಚೆನ್ನೈಗೆ ಮಾರ್ಗ ಬದಲಿಸಿತ್ತು. ಇದೇ ವಿಮಾನದಲ್ಲಿ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಇತರೆ ಸಂಸದರು ಪ್ರಯಾಣಿಸಿದ್ದರು.
ಆದರೆ ಘಟನೆಯ ಬಳಿಕ ಕಾಂಗ್ರೆಸ್ ನಾಯಕ ನೀಡಿರುವ ಹೇಳಿಕೆ ಹಾಗೂ ಏರ್ ಇಂಡಿಯಾದ ಸ್ಪಷ್ಟನೆಯು ವ್ಯತಿರಿಕ್ತವಾಗಿರುವುದು ಗೊಂದಲಕ್ಕೆ ಕಾರಣವಾಗಿದೆ.
'ಭಾನುವಾರ ರಾತ್ರಿ ಒಂದು ತಾಸು ವಿಳಂಬವಾಗಿ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾದ AI2455 ವಿಮಾನವು ಪ್ರತಿಕೂಲ ಹವಾಮಾನದಿಂದಾಗಿ 'ಟರ್ಬ್ಯುಲೆನ್ಸ್'ಗೆ (ಗಾಳಿಯ ತೀವ್ರ ಏರಿಳಿತದಿಂದ ಆಗುವ ಪ್ರಕ್ಷುಬ್ಧತೆ) ಸಿಲುಕಿತ್ತು. ಸುಮಾರು ಒಂದು ತಾಸಿನ ಬಳಿಕ ವಿಮಾನ ಸಿಗ್ನಲ್ ದೋಷದ ಕುರಿತು ಕ್ಯಾಪ್ಟನ್ ಮಾಹಿತಿ ನೀಡಿದ್ದರಲ್ಲದೆ ವಿಮಾನವನ್ನು ಚೆನ್ನೈಗೆ ಮಾರ್ಗ ಬದಲಿಸಲಾಗಿತ್ತು' ಎಂದು ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.
'ವಿಮಾನ ಎರಡು ತಾಸುಗಳ ಕಾಲ ನಿಲ್ದಾಣದ ಮೇಲೆ ಸುತ್ತಾಡುತ್ತಲೇ ಇತ್ತು. ಅಲ್ಲದೆ ಲ್ಯಾಂಡಿಂಗ್ ಅನುಮತಿಗಾಗಿ ಕಾಯುತ್ತಿತ್ತು. ಮೊದಲ ಪ್ರಯತ್ನದಲ್ಲಿ ವಿಮಾನ ಇಳಿಸಲು ಸಾಧ್ಯವಾಗಲಿಲ್ಲ. ರನ್‌ವೇಯಲ್ಲಿ ಇನ್ನೊಂದು ವಿಮಾನವನ್ನು ಗಮನಿಸಿದ ಪೈಲಟ್ ತಕ್ಷಣ ಟೇಕ್ ಆಫ್ ಮಾಡಿದ ಪರಿಣಾಮ ಪ್ರಯಾಣಿಕರ ಪ್ರಾಣ ಉಳಿಯಿತು. ಬಳಿಕ ಎರಡನೇ ಪ್ರಯತ್ನದಲ್ಲಿ ಸುರಕ್ಷಿತವಾಗಿ ವಿಮಾನವನ್ನು ಇಳಿಸಲಾಯಿತು' ಎಂದು ಅವರು ತಿಳಿಸಿದ್ದಾರೆ.
'ಆ ಘಟನೆ ಕುರಿತು ತನಿಖೆ ನಡೆಸಿ ಇಂತಹ ಲೋಪಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ನಾನು ಡಿಜಿಸಿಎ ಮತ್ತು ನಾಗರಿಕ ವಿಮಾನಯಾನ ಸಂಸ್ಥೆಯನ್ನು ಒತ್ತಾಯಿಸುತ್ತೇನೆ' ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.
ಆದರೆ ವೇಣುಗೋಪಾಲ್ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಏರ್ ಇಂಡಿಯಾ, ತಾಂತ್ರಿಕ ದೋಷ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಮುಂಜಾಗ್ರತಾ ಕ್ರಮದಿಂದಾಗಿ ಚೆನ್ನೈಗೆ ಮಾರ್ಗ ಬದಲಿಸಲಾಗಿತ್ತು ಎಂದು ಹೇಳಿದೆ.
ಅದೇ ಹೊತ್ತಿಗೆ ರನ್‌ವೇಯಲ್ಲಿ ಇನ್ನೊಂದು ವಿಮಾನ ಇದ್ದಿದ್ದರಿಂದ ಮೊದಲ ಪ್ರಯತ್ನದಲ್ಲಿ ಲ್ಯಾಂಡಿಂಗ್ ಸಾಧ್ಯವಾಗಲಿಲ್ಲ ಎಂಬ ವೇಣುಗೋಪಾಲ್ ಆರೋಪವನ್ನೂ ಏರ್ ಇಂಡಿಯಾ ನಿರಾಕರಿಸಿದೆ.
ಬಳಿಕ ಈ ಕುರಿತು ಪ್ರತಿಕ್ರಿಯಿಸಿರುವ ವೇಣುಗೋಪಾಲ್, ವಿಮಾನದ ಕ್ಯಾಪ್ಟನ್ ಅವರೇ ರನ್‌ವೇಯಲ್ಲಿ ಇನ್ನೊಂದು ವಿಮಾನ ಇರುವ ಕುರಿತು ಮಾಹಿತಿ ನೀಡಿದ್ದರು ಎಂದು ತಿಳಿಸಿದ್ದಾರೆ. ಅಲ್ಲದೆ ಕೂಲಂಕಷ ತನಿಖೆಗಾಗಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.