
ನವದೆಹಲಿ: ‘ವಿಮಾನ ಅಪಘಾತಕ್ಕೆ ಪೈಲಟ್ ಕಾರಣರಲ್ಲ. ಅದು ಅಪಘಾತ. ಪ್ರಾಥಮಿಕ ವರದಿಯಲ್ಲಿಯೂ ಪೈಲಟ್ ವಿರುದ್ಧ ಯಾವುದೇ ಆರೋಪಗಳಿಲ್ಲ, ನೀವು ಅನಗತ್ಯವಾಗಿ ಹೊರೆ ಹೊತ್ತುಕೊಳ್ಳಬೇಡಿ’ ಹೀಗೆ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್ ಕ್ಯಾ. ಸುಮೀತ್ ಸಭರ್ವಾಲ್ ಅವರ ತಂದೆಗೆ ಸುಪ್ರೀಂ ಕೋರ್ಟ್ ತಿಳಿಸಿತು.
ಏರ್ ಇಂಡಿಯಾ ದುರಂತಕ್ಕೆ ಕೆಲವೆಡೆ ಪೈಲಟ್ ಮೇಲೆ ಆರೋಪ ಹೊರಿಸಲಾಗುತ್ತಿದೆ. ಈ ತನಿಖೆಯನ್ನು ಆಧರಿಸಿದ ಲೇಖನವನ್ನು ವಾಲ್ ಸ್ಟ್ರೀಟ್ ಜರ್ನಲ್ ಪ್ರಕಟಿಸಿದೆ ಎಂದು ಪೈಲಟ್ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿತು.
ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಜೋಯ್‌ಮಲ್ಯ ಬಾಗ್ಚಿ ಅವರಿದ್ದ ನ್ಯಾಯಪೀಠ, ‘ಅಪಘಾತಕ್ಕೆ ಪೈಲಟ್ ಹೊಣೆ ಎಂದು ಎಲ್ಲಿಯೂ ಹೇಳಲಾಗಿಲ್ಲ. ವಿಮಾನ ಅಪಘಾತ ತನಿಖಾ ಮಂಡಳಿಯ (AAIB) ಪ್ರಾಥಮಿಕ ವರದಿಯಲ್ಲಿಯೂ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳ ನಡುವಿನ ಸಂಭಾಷಣೆಯನ್ನು ಮಾತ್ರ ಉಲ್ಲೇಖಿಸಲಾಗಿದೆ. ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ಭಾರತವನ್ನು ದೂಷಿಸಲು ಮಾಡಿದ್ದ ಅಸಹ್ಯಕರ ವರದಿಯಾಗಿತ್ತು’ ಎಂದು ಹೇಳಿದೆ.
ಈ ಘಟನೆಯ ಕುರಿತು ಬಾಕಿ ಇರುವ ಇತರ ಅರ್ಜಿಗಳೊಂದಿಗೆ ಈ ಪ್ರಕರಣದ ವಿಚಾರಣೆಯನ್ನು ನ.10ಕ್ಕೆ ಕೋರ್ಟ್ ಮುಂದೂಡಿದೆ.
ಜೂನ್ 12ರಂದು ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ಅಪಘಾತದಲ್ಲಿ 260 ಜನ ಮೃತಪಟ್ಟಿದ್ದರು. 229 ಜನ ಪ್ರಯಾಣಿಕರು, 12 ಕ್ಯಾಬಿನ್ ಸಿಬ್ಬಂದಿ ಮತ್ತು ವಿಮಾನ ಬಿದ್ದಾಗ 19 ಜನ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.