ADVERTISEMENT

ಮಹಿಳೆಯ ಮೇಲೆ ಮೂತ್ರ ಪ್ರಕರಣ: ಏರ್‌ ಇಂಡಿಯಾಗೆ DGCA ತಪರಾಕಿ‌‌

ಶೋಕಾಸ್‌ ನೊಟಿಸ್‌ನಲ್ಲಿ ಕಠಿಣ ಶಬ್ದಗಳಲ್ಲಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 14:03 IST
Last Updated 5 ಜನವರಿ 2023, 14:03 IST
ಏರ್ ಇಂಡಿಯಾ
ಏರ್ ಇಂಡಿಯಾ   

ನವದೆಹಲಿ: ಮಹಿಳಾ ಯಾತ್ರಿಯ ಮೇಲೆ ಕುಡಿದ ಮತ್ತಿನಲ್ಲಿ ಉದ್ಯಮಿಯೊಬ್ಬರು ಮೂತ್ರ ಮಾಡಿದ ಪ್ರಕರಣವನ್ನು ಗಹನವಾಗಿ ಪರಿಗಣಿಸದ ಏರ್‌ ಇಂಡಿಯಾ ವಿರುದ್ಧ ನಾಗರಿಕ ವಿಮಾನಯಾನ ನಿರ್ದೇಶನಾಲಯವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಪ್ರಕರಣದಲ್ಲಿ ಏರ್‌ ಇಂಡಿಯಾ ವೃತ್ತಿಪರವಾಗಿ ನಡೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ನಿರ್ದೇಶನಾಲಯ ಇದು ವ್ಯವಸ್ಥಿತ ವೈಫಲ್ಯಕ್ಕೆ ಕಾರಣವಾಗಿದೆ ಎಂದು ಕಠು ಶಬ್ದಗಳಿಂದ ತರಾಟೆಗೆ ತೆಗೆದುಕೊಂಡಿದೆ.

ಪ್ರಕರಣ ಸಂಬಂಧ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಏರ್‌ ಇಂಡಿಯಾಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

ADVERTISEMENT

ಸಂಬಂಧಪಟ್ಟ ಪ್ರಬಂಧಕ, ನಿರ್ದೇಶಕ, ಪೈಲಟ್‌ಗಳು ಹಾಗೂ ವಿಮಾನ ಸಿಬ್ಬಂದಿಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದ್ದು, ಉತ್ತರಿಸಲು ಎರಡು ವಾರಗಳ ಕಾಲವಕಾಶ ನೀಡಲಾಗಿದೆ.

‘ವಿಮಾನದಲ್ಲಿ ಅಶಿಸ್ತಿನ ಪ್ರಯಾಣಿಕರ ನಿರ್ವಹಣೆಗೆ ಸಂಬಂಧಿಸಿದಂತೆ ಇರುವ ನಿಬಂಧನೆಗಳನ್ನು ಪಾಲಿಸಲಾಗಿಲ್ಲ. ಸಂಬಂಧಪಟ್ಟ ವಿಮಾನಯಾನ ಕಂಪನಿಯು ತೆಗೆದುಕೊಂಡ ನಿರ್ಧಾರ ವೃತ್ತಿಪರ ಅಲ್ಲ. ಇದರಿಂದಾಗಿ ವ್ಯವಸ್ಥಿತ ವೈಫಲ್ಯ ಉಂಟಾಗಿದೆ‘ ಎಂದು ನೋಟಿಸ್‌ನಲ್ಲಿ ಹೇಳಿದೆ.

ಏನಿದು ಘಟನೆ?

2022ರ ನವೆಂಬರ್‌ 26 ರಂದು, ಮುಂಬೈ ಮೂಲದ ಉದ್ಯಮಿ ಶಂಕರ್ ಮಿಶ್ರಾ ಎಂಬವರು ಕುಡಿದ ಮತ್ತಿನಲ್ಲಿ ಮಹಿಳೆಯ ಮೇಲೆ ಮೂತ್ರ ಮಾಡಿದ್ದರು. ವಿಮಾನ ಲ್ಯಾಂಡ್‌ ಆದ ಬಳಿಕವೂ ಅವರ ಮೇಲೆ ಯಾವ ಕ್ರಮ ತೆಗೆದುಕೊಳ್ಳದೆ ಹಾಗೇ ಕಳುಹಿಸಲಾಗಿತ್ತು.

ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಈ ಘಟನೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.