
ಬಂಧನ
ನವದೆಹಲಿ: ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾದ ಪ್ರಕರಣದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಪೈಲಟ್‌ವೊಬ್ಬರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದು, ಬಳಿಕ ಅವರು ಜಾಮೀನನ್ನೂ ಪಡೆದುಕೊಂಡಿದ್ದಾರೆ. ಘಟನೆ ನಡೆದ ವೇಳೆ ಪೈಟಲ್ ಕರ್ತವ್ಯದಲ್ಲಿ ಇರಲಿಲ್ಲ.
ಕ್ಯಾಪ್ಟನ್ ವೀರೇಂದ್ರ ಸೆಜ್ವಾಲ್ ಅವರು ಅಂಕಿತ್ ದೇವಾನ್ ಅವರು ಮೇಲೆ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿ.19ರಂದು ಹಲ್ಲೆ ನಡೆಸಿದ್ದರು. ಸರತಿ ಸಾಲಿನಲ್ಲಿ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ನಿಲ್ಲುತ್ತಿಲ್ಲ ಎನ್ನುವ ಕಾರಣಕ್ಕೆ ಗಲಾಟೆ ಆರಂಭವಾಗಿತ್ತು. ಅಂಕಿತ್ ಅವರು ಪೊಲೀಸರಿಗೆ ದೂರು ನೀಡಿದ್ದರು.
‘ಪೈಲಟ್ ನನ್ನ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾರೆ. ಘಟನೆಯಿಂದ ನನ್ನ 7 ವರ್ಷ ಮಗಳು ಹೆದರಿದ್ದಾಳೆ. ನನ್ನ ಮೂಗಿನ ಮೂಳೆಯು ಮುರಿದಿದೆ ಎಂದು ಸಿಟಿ ಸ್ಕ್ಯಾನ್‌ನಲ್ಲಿ ತಿಳಿದುಬಂದಿದೆ’ ಎಂದು ಅಂಕಿತ್ ಅವರು ದೂರಿದ್ದರು.
ಘಟನೆ ನಡೆದ ಟರ್ಮಿನಲ್ 1ನ ವಿವಿಧ ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ. ‘ಘಟನೆ ಬಗ್ಗೆ ನಮಗೆ ಅರಿವಿದ್ದು, ಪೈಲಟ್ ವೀರೇಂದ್ರ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ’ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.