ನವದೆಹಲಿ: ತಿರುವನಂತಪುರದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಚೆನ್ನೈಗೆ ತಿರುಗಿಸಲಾಗಿದೆ. ಇದೇ ವಿಮಾನದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವು ಸಂಸದರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ವೇಣುಗೋಪಾಲ್, ‘ತಿರುವನಂತಪುರದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು AI 2455 ಅಪಘಾತಕ್ಕೀಡಾಗುವ ಸಾಧ್ಯತೆ ಇತ್ತು. ನಾನು ಸೇರಿದಂತೆ ಹಲವು ಸಂಸದರು ಮತ್ತು ನೂರಾರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪ್ರಕ್ಷುಬ್ಧತೆಗೆ ಕಾರಣವಾಗಿತ್ತು’ ಎಂದು ತಿಳಿಸಿದ್ದಾರೆ.
‘ವಿಮಾನವು ಟೇಕ್ ಆಫ್ ಆದ ಒಂದು ಗಂಟೆ ನಂತರ ಕ್ಯಾಪ್ಟನ್ ವಿಮಾನ ಸಿಗ್ನಲ್ ದೋಷವನ್ನು ಘೋಷಿಸಿದ್ದರು. ಬಳಿಕ ವಿಮಾನವನ್ನು ಚೆನ್ನೈಗೆ ತಿರುಗಿಸಿದ್ದರು. ಸುಮಾರು ಎರಡು ಗಂಟೆಗಳ ಕಾಲ ವಿಮಾನವನ್ನು ಇಳಿಸಲು ಅನುಮತಿಗಾಗಿ ಕಾಯುತ್ತಾ ವಿಮಾನ ನಿಲ್ದಾಣವನ್ನು ಸುತ್ತುತ್ತಿದ್ದೆವು. ಚೆನ್ನೈಯಲ್ಲಿ ನಮ್ಮ ವಿಮಾನವನ್ನು ಇಳಿಸುವ ಮೊದಲ ಪ್ರಯತ್ನ ವಿಫಲಾಯಿತು. ಕಾರಣ ಮತ್ತೊಂದು ವಿಮಾನವು ಅದೇ ರನ್‌ವೇಯಲ್ಲಿತ್ತು. ಈ ತುರ್ತು ಸಂದರ್ಭದಲ್ಲಿ ಕ್ಯಾಪ್ಟನ್‌ನ ತ್ವರಿತ ನಿರ್ಧಾರವು ವಿಮಾನದಲ್ಲಿದ್ದ ಪ್ರತಿಯೊಬ್ಬರ ಜೀವವನ್ನು ಉಳಿಸಿತು. ಎರಡನೇ ಪ್ರಯತ್ನದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು’ ಎಂದು ವೇಣುಗೋಪಾಲ್ ವಿವರಿಸಿದ್ದಾರೆ.
‘ನಾವು ಕೌಶಲ ಮತ್ತು ಅದೃಷ್ಟದಿಂದ ಆಗಬಹುದಾದ ದುರಂತದಿಂದ ಪಾರಾದೇವು. ಪ್ರಯಾಣಿಕರ ಸುರಕ್ಷತೆಯು ಅದೃಷ್ಟವನ್ನು ಅವಲಂಬಿಸಲು ಸಾಧ್ಯವಿಲ್ಲ. ಈ ಘಟನೆಯನ್ನು ತುರ್ತಾಗಿ ತನಿಖೆ ಮಾಡಲು, ಇಂತಹ ಲೋಪಗಳು ಮತ್ತೆಂದೂ ಸಂಭವಿಸದಂತೆ ಕ್ರಮ ತೆಗೆದುಕೊಳ್ಳುವಂತೆ ನಾನು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವನ್ನು (ಡಿಜಿಸಿಎ) ಒತ್ತಾಯಿಸುತ್ತೇನೆ’ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
ಏರ್ ಇಂಡಿಯಾ ಹೇಳಿದ್ದೇನು?
‘ಆಗಸ್ಟ್ 10ರಂದು ತಿರುವನಂತಪುರದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ–AI2455 ವಿಮಾನದ ಸಿಬ್ಬಂದಿ ಶಂಕಿತ ತಾಂತ್ರಿಕ ದೋಷ ಮತ್ತು ಮಾರ್ಗಮಧ್ಯೆ ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮವಾಗಿ ಚೆನ್ನೈಗೆ ಮಾರ್ಗ ಬದಲಾವಣೆ ಮಾಡಿದ್ದಾರೆ’ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಯಾಣಿಕರನ್ನು ಆದಷ್ಟು ಬೇಗ ಅವರ ಗಮ್ಯಸ್ಥಾನಗಳಿಗೆ ತಲುಪಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ಜತೆಗೆ, ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.
ಮೂಲಗಳ ಪ್ರಕಾರ, ವಿಮಾನವು ರಾತ್ರಿ 8 ಗಂಟೆಗೆ ತಿರುವನಂತಪುರದಿಂದ ಹೊರಟು ರಾತ್ರಿ 10.35ರ ಸುಮಾರಿಗೆ ಚೆನ್ನೈಗೆ ತಲುಪಬೇಕಿತ್ತು. ಪ್ರಯಾಣಿಕರ ಸಂಖ್ಯೆಯ ಬಗ್ಗೆ ವಿವರಗಳು ಲಭ್ಯವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.