ADVERTISEMENT

‘ಎಐ’ಮಾರಾಟಕ್ಕೆ ಬಿಡ್‌ ಆಹ್ವಾನ

ಶೇ 100ರಷ್ಟು ಖಾಸಗೀಕರಣ; 2ನೇ ಬಾರಿಗೆ ಮಾರಾಟ ಯತ್ನ

ಪಿಟಿಐ
Published 27 ಜನವರಿ 2020, 19:53 IST
Last Updated 27 ಜನವರಿ 2020, 19:53 IST
   

ನವದೆಹಲಿ: ಸರ್ಕಾರಿ ಸ್ವಾಮ್ಯದ ನಷ್ಟಪೀಡಿತ ನಾಗರಿಕ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾದ (ಎಐ) ಸಂಪೂರ್ಣ ಖಾಸಗೀಕರಣಕ್ಕೆ ಬಿಡ್‌ ಆಹ್ವಾನಿಸಲಾಗಿದೆ.

ಇದರ ಜತೆಗೆ, ‘ಎಐ’ನ ಅಂಗಸಂಸ್ಥೆಯಾಗಿರುವ ಅಗ್ಗದ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿನ (ಎಐಇ) ಶೇ 100ರಷ್ಟು ಮತ್ತು ಸಿಂಗಪುರ ಏರ್‌ಲೈನ್ಸ್‌ ಸಹಭಾಗಿತ್ವದಲ್ಲಿ ಇರುವ ‘ಎಐಎಸ್‌ಎಟಿಎಸ್‌’ನ ಶೇ 50ರಷ್ಟು ಪಾಲು ಬಂಡವಾಳವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಬಿಡ್‌ನಲ್ಲಿ ಭಾಗವಹಿಸುವವರು ‘ಎಐ’ ಖರೀದಿಸಲು ತಮಗೆ ಆಸಕ್ತಿ ಇರುವುದನ್ನು ಸೂಚಿಸಲು ಮಾರ್ಚ್‌ 17 ಕೊನೆಯ ದಿನವಾಗಿದೆ. ಬಿಡ್‌ನಲ್ಲಿ ಯಶಸ್ವಿಯಾದವರಿಗೆ ‘ಎಐ’ ಮತ್ತು ‘ಎಐಇ’ನ ಆಡಳಿತಾತ್ಮಕ ನಿಯಂತ್ರಣವನ್ನು ಸಂಪೂರ್ಣವಾಗಿ ಬಿಟ್ಟುಕೊಡಲಾಗುವುದು.

ADVERTISEMENT

ಷರತ್ತು ಸಡಿಲು: ‘ಎಐ’ ದೀರ್ಘಕಾಲದಿಂದ ನಷ್ಟದಲ್ಲಿ ನಡೆಯುತ್ತಿದೆ. ಎರಡು ವರ್ಷಗಳಲ್ಲಿನ ಎರಡನೇ ಮಾರಾಟ ಪ್ರಯತ್ನ ಇದಾಗಿದೆ. ಈ ಬಾರಿ ಸರ್ಕಾರ ಈ ಮೊದಲಿನ ಅನೇಕ ಷರತ್ತುಗಳನ್ನು ಸಡಿಲಿಸಿದೆ.

ಏರ್‌ ಇಂಡಿಯಾ ಎಂಜಿನಿಯರಿಂಗ್‌ ಸರ್ವಿಸಸ್‌, ಏರ್ ಇಂಡಿಯಾ ಏರ್‌ ಟ್ರಾನ್ಸಪೋರ್ಟ್ ಸರ್ವಿಸಸ್‌, ಏರ್‌ಲೈನ್‌ ಅಲೈಡ್‌ ಸರ್ವಿಸಸ್‌ ಆ್ಯಂಡ್‌ ಹೋಟೆಲ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾವನ್ನು ಪ್ರತ್ಯೇಕ ಕಂಪನಿಯಾದ ಏರ್‌ ಇಂಡಿಯಾ ಅಸೆಟ್ಸ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ಗೆ (ಎಐಎಎಚ್‌ಎಲ್‌) ವರ್ಗಾಯಿಸಲಾಗುವುದು. ಇದು ಉದ್ದೇಶಿತ ‘ಎಐ’ ಮಾರಾಟದ ಭಾಗವಾಗಿರುವುದಿಲ್ಲ.

ಷೇರು ವಿಕ್ರಯ ಪ್ರಕ್ರಿಯೆ ಅಂತಿಮಗೊಳಿಸುವ ಸಂದರ್ಭದಲ್ಲಿ ‘ಎಐ’ ಮತ್ತು ‘ಎಐಇ’ನ ₹ 23,286 ಕೋಟಿ ಮೊತ್ತದ ಸಾಲವು ಯಶಸ್ವಿ ಬಿಡ್‌ದಾರರಿಗೆ ವರ್ಗಾವಣೆಗೊಳ್ಳಲಿದೆ. ಉಳಿದ ₹ 60,074 ಕೋಟಿ ಸಾಲವನ್ನು ‘ಎಐಎಎಚ್‌ಎಲ್‌’ಗೆ ವರ್ಗಾಯಿಸಲಾಗುವುದು. ಸಿಬ್ಬಂದಿಗೆ ಕೊಡಬೇಕಾದ ₹ 1,383 ಕೋಟಿಯನ್ನು ಸರ್ಕಾರವೇ ಪಾವತಿಸಲಿದೆ ಎಂದು ಬಿಡ್‌ ಆಹ್ವಾನದ ಪ್ರಾಥಮಿಕ ದಾಖಲೆ ಪತ್ರಗಳಲ್ಲಿ ಉಲ್ಲೇಖಿಸಲಾಗಿದೆ.

ಸಿಬ್ಬಂದಿಗೆ ಷೇರು ಆಯ್ಕೆ: ‘ಉದ್ಯೋಗಿ ಷೇರು ಆಯ್ಕೆ ಕಾರ್ಯಕ್ರಮ’ದಡಿ (ಇಎಸ್‌ಒಪಿ) ಸಂಸ್ಥೆಯ ನೌಕರರಿಗೆ ಶೇ 3ರಷ್ಟು ಷೇರುಗಳನ್ನು ಕಡಿಮೆ ದರದಲ್ಲಿ ನೀಡುವ ಪ್ರಸ್ತಾವ ಇದೆ. ಈ ಉದ್ದೇಶಕ್ಕೆ 98 ಕೋಟಿ ಷೇರುಗಳನ್ನು ಪ್ರತ್ಯೇಕವಾಗಿ ಇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

‘ಎಐ’ನ ಶೇ 76ರಷ್ಟು ಪಾಲು ಬಂಡವಾಳವನ್ನು ಖಾಸಗಿಯವರಿಗೆ ವರ್ಗಾಯಿಸಲು ಸರ್ಕಾರ 2018ರಲ್ಲಿ ಮುಂದಾಗಿತ್ತು. ಷೇರು ಮಾರಾಟದ ಕಠಿಣ ಷರತ್ತುಗಳ ಕಾರಣಕ್ಕೆ ಖರೀದಿಗೆ ಯಾರೊಬ್ಬರೂ ಮುಂದೆ ಬಂದಿರಲಿಲ್ಲ.

***

ಹಳೆಯ ಮಾರಾಟ ಯತ್ನದಿಂದ ಪಾಠ ಕಲಿಯಲಾಗಿದೆ. ಯಶಸ್ವಿ ಖರೀದಿದಾರರು ಏರ್ ಇಂಡಿಯಾ ಬ್ರ್ಯಾಂಡ್‌ ಮುಂದುವರೆಸಬಹುದು

- ಹರ್ದೀಪ್‌ ಸಿಂಗ್‌ ಪುರಿ, ನಾಗರಿಕ ವಿಮಾನಯಾನ ರಾಜ್ಯಸಚಿವ

***

ಎಐ ಖಾಸಗೀಕರಣ ಯತ್ನವು ರಾಷ್ಟ್ರ ವಿರೋಧಿ ಕೃತ್ಯವಾಗಿದ್ದು, ಮಾರಾಟ ವಿರೋಧಿಸಿ ಕೋರ್ಟ್‌ಗೆ ಹೋಗಬೇಕಾದೀತು

- ಸುಬ್ರಮಣಿಯನ್‌ ಸ್ವಾಮಿ,ಬಿಜೆಪಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.