ADVERTISEMENT

ಅನುಚಿತ ವರ್ತನೆ ವಿರುದ್ಧ ಕ್ರಮ ತೆಗೆದುಕೊಳ್ಳಿ, ಇಲ್ಲವೇ ..: DGCA ಎಚ್ಚರಿಕೆ

ವಿಮಾನಯಾನ ಕಂಪನಿಗಳಿಗೆ ಖಡಕ್‌ ಸೂಚನೆ ನೀಡಿದ ಡಿಜಿಸಿಎ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜನವರಿ 2023, 14:19 IST
Last Updated 6 ಜನವರಿ 2023, 14:19 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ವಿಮಾನದ ಸಹಯಾತ್ರಿಗಳ ಮೇಲೆ ಮೂತ್ರ ವಿಸರ್ಜಿಸುವ ಪ್ರಕರಣಗಳು ವರದಿಯಾದ ಬೆನ್ನಲ್ಲೇ, ಅನುಚಿತವಾಗಿ ಹಾಗೂ ಅಶಿಸ್ತಿನಿಂದ ವರ್ತಿಸುವ ಪ್ರಯಾಣಿಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವಿಮಾನಯಾನ ಕಂಪನಿಗಳಿಗೆ ಸೂಚನೆ ನೀಡಿದೆ.

ಅನುಚಿತವಾಗಿ ವರ್ತನೆ ಮಾಡುವ ಪ್ರಯಾಣಿಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ, ವಿಮಾನ ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅದು ಎಚ್ಚರಿಕೆಯನ್ನೂ ನೀಡಿದೆ.

ಕೆಟ್ಟದಾಗಿ ವರ್ತಿಸುವ ಪ್ರಯಾಣಿಕರು ಒಂದು ವೇಳೆ ಒಳ್ಳೆಯ ಮಾತಿಗೆ ಬಗ್ಗದಿದ್ದರೆ ಸೂಕ್ತ ಉಪಕರಣಗಳನ್ನು ಬಳಕೆ ಮಾಡಬಹುದು ಎಂದು ನಿರ್ದೇಶನಾಲಯ ಹೇಳಿದೆ. ಇಂತಹ ವರ್ತನೆಗಳನ್ನು ಹತೋಟಿಗೆ ತರಲು ಏನೇನು ಮಾಡಲು ಸಾಧ್ಯತೆಗಳಿವೆ ಎಂಬುದರ ಪಟ್ಟಿಯನ್ನು ಸಿದ್ದಪಡಿಸುತ್ತಿರುವುದಾಗಿಯೂ ಹೇಳಿದೆ.

ADVERTISEMENT

‘ವಿಮಾನ ಪ್ರಯಾಣದ ವೇಳೆ ಕೆಲ ಪ್ರಯಾಣಿಕರು ಅನುಚಿತ ವರ್ತನೆ ತೋರಿದ್ದು ನಿರ್ದೇಶನಾಲಯದ ಗಮನಕ್ಕೆ ಬಂದಿದ್ದು, ಈ ಘಟನೆಗಳಲ್ಲಿ ಪೈಲಟ್‌ಗಳು, ವಿಮಾನ ಸಿಬ್ಬಂದಿಗಳು ಸರಿಯಾದ ಕ್ರಮ ತೆಗೆದುಕೊಂಡಿಲ್ಲ‘ ಎಂದು ಡಿಜಿಸಿಎ ಹೇಳಿದೆ.

ಇಂಥ ಘಟನೆಗಳ ಬಗ್ಗೆ ಕ್ರಮ ತೆಗೆದುಕೊಳ್ಳದೇ ಇರುವುದರಿಂದ ವಿಮಾನಯಾನ ಕಂಪನಿಗಳ ಪ್ರತಿಷ್ಠೆಗೆ ಧಕ್ಕೆಯಾಗಲಿದೆ. ಅನ್ವಯವಾಗುವ ನಿಯಮಗಳಿಗೆ ಯಾವುದೇ ಅನುಸರಣೆಯಿಲ್ಲದಿದ್ದರೆ ಕಟ್ಟುನಿಟ್ಟಾಗಿ ವ್ಯವಹರಿಸಬೇಕು ಎಂದು ಡಿಜಿಸಿಎ ಹೇಳಿದೆ.

ವಿಮಾನ ಪೈಲಟ್‌ ಪರಿಸ್ಥಿತಿಯನ್ನು ಅವಲೋಕನ ಮಾಡಿ, ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬೇಕು. ವಿಮಾನ ಲ್ಯಾಂಡ್‌ ಆದ ಬಳಿಕ ಸಂಬಂಧಪಟ್ಟ ಇಲಾಖೆಯಲ್ಲಿ ಎಫ್‌ಐಆರ್‌ ದಾಖಲು ಮಾಡಿ, ಭದ್ರತಾ ಸಿಬ್ಬಂದಿಗಳಿಗೆ ಒಪ್ಪಿಸಬೇಕು ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.