
ನವದೆಹಲಿ: ಕಳೆದ ವರ್ಷ(2025) ಜೂನ್ 12ರಂದು ನಡೆದ ಏರ್ ಇಂಡಿಯಾ ವಿಮಾನ ಅಪಘಾತ ಪ್ರಕರಣದ ತನಿಖೆಯ ಕುರಿತು ಸಲ್ಲಿಕೆಯಾದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಇಂದು (ಬುಧವಾರ) ಒಪ್ಪಿಗೆ ನೀಡಿದೆ.
ವಿಮಾನ ದುರಂತ ಕುರಿತ ತನಿಖೆಯು ಮೂಲಭೂತ ಹಕ್ಕುಗಳಾದ ಬದುಕುವ ಹಕ್ಕು, ಸಮಾನತೆಯ ಹಕ್ಕು ಮತ್ತು ಸತ್ಯ ಮಾಹಿತಿಯನ್ನು ಪಡೆಯುವ ಹಕ್ಕನ್ನು ಉಲ್ಲಂಘಿಸಿದೆ ಎಂದು ಸರ್ಕಾರೇತರ ಸಂಸ್ಥೆಯೊಂದು (ಎನ್‌ಜಿಒ) ಅರ್ಜಿಯಲ್ಲಿ ಆರೋಪಿಸಿದೆ.
ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ, ಅಹಮದಾಬಾದ್‌ನಲ್ಲಿ ಪತನಗೊಂಡಿತ್ತು. ದುರ್ಘಟನೆಯಲ್ಲಿ ಒಟ್ಟು 260 ಮಂದಿ ಮೃತಪಟ್ಟಿದ್ದರು.
ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ಅವರು, ‘ಅರ್ಜಿ ಬಗ್ಗೆ ಕೇಂದ್ರ ಸರ್ಕಾರವಾಗಲಿ, ವಿಮಾನ ಅಪಘಾತ ತನಿಖಾ ಮಂಡಳಿಯಾಗಲಿ (ಎಎಐಬಿ) ಪ್ರತಿಕ್ರಿಯೆಯನ್ನು ಸಲ್ಲಿಸಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ ಮಾಲ್ಯ ಬಾಗ್ಚಿ ಅವರ ನೇತೃತ್ವದ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
‘ಬೋಯಿಂಗ್ 787 ವಿಮಾನಗಳಲ್ಲಿ ಸಮಸ್ಯೆ ಇದೆ ಎಂದು ಪೈಲಟ್‌ಗಳ ಸಂಘ ತಿಳಿಸಿದೆ’ ಎಂದು ಅವರು ಹೇಳಿದ್ದಾರೆ.
ನಂತರ ಪ್ರತಿಕ್ರಿಯಿಸಿದ ಸಿಜೆಐ, ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತ ಅರ್ಜಿಗಳ ವಿಚಾರಣೆ ಇಂದಿಗೆ ಅಂತ್ಯಗೊಳ್ಳಲಿದೆ. ವಿಮಾನ ದುರಂತ ಕುರಿತ ಅರ್ಜಿಯನ್ನು ಶೀಘ್ರವೇ ವಿಚಾರಣೆಗೆ ಪಟ್ಟಿ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.