ADVERTISEMENT

ಏರ್‌ ಇಂಡಿಯಾದ 6 ‘ಡ್ರೀಮ್‌ಲೈನರ್’ ಪ್ರಯಾಣ ರದ್ದು: ಕಾರಣ ಏನು?

ತಾಂತ್ರಿಕ ದೋಷ, ವಿಮಾನಗಳ ಅಲಭ್ಯತೆ ಕಾರಣ ಎಂದು ಸ್ಪಷ್ಟೀಕರಣ ನೀಡಿದ ಏರ್‌ ಇಂಡಿಯಾ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 0:31 IST
Last Updated 18 ಜೂನ್ 2025, 0:31 IST
ಸ್ಯಾನ್‌ಫ್ರಾನ್ಸಿಸ್ಕೋದಿಂದ ಮುಂಬೈಗೆ ತೆರಳುತ್ತಿದ್ದ ವಿಮಾನವು ಕೋಲ್ಕತ್ತದಲ್ಲಿ ಇಳಿದ ನಂತರ, ಸಂಚಾರ ಮುಂದುವರಿಸಲಿಲ್ಲ. ಆಗ ಪ್ರಯಾಣಿಕರಿಗೆ ಮುಂದಿನ ಸೂಚನೆಯವರೆಗೆ ಕಾಯುವಂತೆ ವಿಮಾನದ ಸಿಬ್ಬಂದಿ ಸೂಚನೆ ನೀಡಿದರು. –ಪಿಟಿಐ ಚಿತ್ರ
ಸ್ಯಾನ್‌ಫ್ರಾನ್ಸಿಸ್ಕೋದಿಂದ ಮುಂಬೈಗೆ ತೆರಳುತ್ತಿದ್ದ ವಿಮಾನವು ಕೋಲ್ಕತ್ತದಲ್ಲಿ ಇಳಿದ ನಂತರ, ಸಂಚಾರ ಮುಂದುವರಿಸಲಿಲ್ಲ. ಆಗ ಪ್ರಯಾಣಿಕರಿಗೆ ಮುಂದಿನ ಸೂಚನೆಯವರೆಗೆ ಕಾಯುವಂತೆ ವಿಮಾನದ ಸಿಬ್ಬಂದಿ ಸೂಚನೆ ನೀಡಿದರು. –ಪಿಟಿಐ ಚಿತ್ರ   

ಅಹಮದಾಬಾದ್/ಮುಂಬೈ/ಕೋಲ್ಕತ್ತ: ಅಂತರರಾಷ್ಟ್ರೀಯ ಮಾರ್ಗದಲ್ಲಿ ಪ್ರಯಾಣಿಸುವ, ಏರ್‌ ಇಂಡಿಯಾ ಸಂಸ್ಥೆಗೆ ಸೇರಿದ 6 ‘ಡ್ರೀಮ್‌ಲೈನರ್’ ವಿಮಾನಗಳ ಹಾರಾಟವು ಮಂಗಳವಾರ ರದ್ದಾಗಿದೆ.

ಅಹಮದಾಬಾದ್‌ನಲ್ಲಿ ನಡೆದ ಏರ್‌ ಇಂಡಿಯಾ ವಿಮಾನದ ದುರಂತದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 

ದೆಹಲಿಯಿಂದ ಪ್ಯಾರಿಸ್‌ಗೆ ತೆರಳಬೇಕಿದ್ದ ‘ಎಐ143’ ವಿಮಾನದಲ್ಲಿ ಹಾರಾಟಕ್ಕೆ ಮುಂಚೆ ನಡೆಸಿದ ಪರೀಕ್ಷೆ ವೇಳೆ ತಾಂತ್ರಿಕ ದೋಷ ಪತ್ತೆಯಾಗಿದೆ. ತಾಂತ್ರಿಕ ದೋಷ ಸರಿಪಡಿಸಲು ಹೆಚ್ಚಿನ ಸಮಯ ಬೇಕಿದ್ದು, ಪ್ಯಾರಿಸ್‌ನ ಚಾರ್ಲ್ಸ್‌ ಡೆ ಗಾಲ್‌ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ವಿಮಾನ ಹಾರಾಟಕ್ಕೆ ನಿರ್ಬಂಧವಿದೆ. ಹೀಗಾಗಿ ಹಾರಾಟ ರದ್ದುಗೊಳಿಸಲಾಗಿದೆ ಎಂದು ಸಂಸ್ಥೆ ಸ್ಪಷ್ಟನೆ ನೀಡಿದೆ.

ADVERTISEMENT

ಅಹಮದಾಬಾದ್‌–ಲಂಡನ್‌ ನಡುವಿನ ‘ಎಐ159’ರ ಪ್ರಯಾಣವು ವಿಮಾನದ ಅಲಭ್ಯತೆಯಿಂದಾಗಿ ರದ್ದುಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ. ಈ ವಿಮಾನದ ಹಾರಾಟ ರದ್ದಾಗಲು ತಾಂತ್ರಿಕ ದೋಷ ಕಾರಣ ಎಂಬ ವಿಚಾರದಲ್ಲಿ ಹುರುಳಿಲ್ಲ ಎಂದೂ ತಿಳಿಸಿದೆ. ಅಹಮದಾಬಾದ್‌ ದುರಂತದ ಬಳಿಕ ಈ ಮಾರ್ಗದ ವಿಮಾನದ ಕೋಡ್‌ ಅನ್ನು ‘ಎಐ171’ರಿಂದ ‘ಎಐ159’ಗೆ ಬದಲಿಸಲಾಗಿದೆ.

ಇನ್ನು ಲಂಡನ್‌ನಿಂದ ಅಮೃತಸರಕ್ಕೆ ಬರಬೇಕಿದ್ದ ‘ಎಐ170’ ವಿಮಾನದ ಪ್ರಯಾಣವನ್ನೂ ಮಂಗಳವಾರ ರದ್ದುಗೊಳಿಸಲಾಗಿದೆ. ಇರಾನ್‌ ಹಾಗೂ ಇಸ್ರೇಲ್‌ ನಡುವಿನ ಯುದ್ಧದಿಂದಾಗಿ ಇರಾನ್‌ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿರುವ ಕಾರಣ ಈ ವಿಮಾನದ ಪ್ರಯಾಣ ರದ್ದುಗೊಳಿಸಿರುವುದಾಗಿ ಏರ್‌ ಇಂಡಿಯಾ ಮಾಹಿತಿ ನೀಡಿದೆ. 

‘ದೆಹಲಿ–ದುಬೈ ನಡುವೆ ಸಂಚರಿಸುವ ‘ಎಐ915’ ವಿಮಾನ, ದೆಹಲಿ–ವಿಯೆನ್ನಾ ನಡುವಿನ ‘ಎಐ153’ ಹಾಗೂ ಬೆಂಗಳೂರು–ಲಂಡನ್‌ ನಡುವೆ ಪ್ರಯಾಣಿಸುವ ‘ಎಐ133’ ವಿಮಾನಗಳ ಹಾರಾಟವೂ ಮಂಗಳವಾರ ರದ್ದಾಗಿದೆ. ಈ ಎಲ್ಲಾ ವಿಮಾನಗಳೂ ‘787–8 ಡ್ರೀಮ್‌ಲೈನರ್‌’ ವಿಮಾನಗಳು’ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ. 

ಅಹಮದಾಬಾದ್‌ ದುರಂತದ ಬಳಿಕ ಏರ್‌ ಇಂಡಿಯಾ ಸಂಸ್ಥೆಯ ವಿಮಾನಗಳು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅವುಗಳ ನಿರ್ವಹಣೆ, ಸುರಕ್ಷತೆಯ ಕುರಿತು ಆಕ್ಷೇಪಗಳೂ ವ್ಯಕ್ತವಾಗಿವೆ. ಈ ನಡುವೆಯೇ ತಾಂತ್ರಿಕ ದೋಷದ ಕಾರಣಗಳಿಂದಾಗಿ ವಿಮಾನ ಹಾರಾಟಗಳು ರದ್ದಾಗಿವೆ.

ತಾಂತ್ರಿಕ ದೋಷ– ಕೋಲ್ಕತ್ತದಲ್ಲೇ ಉಳಿದ ವಿಮಾನ

ಸ್ಯಾನ್‌ ಫ್ರಾನ್ಸಿಸ್ಕೋದಿಂದ ಕೋಲ್ಕತ್ತ ಮಾರ್ಗವಾಗಿ ಮುಂಬೈಗೆ ಸಾಗುತ್ತಿದ್ದ ಏರ್‌ ಇಂಡಿಯಾ ವಿಮಾನವು ಕೋಲ್ಕತ್ತದಲ್ಲೇ ಹಾರಾಟ ಸ್ಥಗಿತಗೊಳಿಸಿದೆ. ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಟಾಪ್‌ಓವರ್‌ ವೇಳೆ ವಿಮಾನದ ಒಂದು ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ಕೆಲವು ಪ್ರಯಾಣಿಕರಿಗೆ ಬೇರೆ ವಿಮಾನಗಳಲ್ಲಿ ಮುಂಬೈಗೆ ತೆರಳಲು ವ್ಯವಸ್ಥೆ ಮಾಡಲಾಗಿದ್ದು ಉಳಿದವರಿಗೆ ಹೋಟೆಲ್‌ಗಳಲ್ಲಿ ವಸತಿ ಕಲ್ಪಿಸಿರುವುದಾಗಿ ಸಂಸ್ಥೆ ಹೇಳಿದೆ.

ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ಕೊಚ್ಚಿಯಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವು ಮಂಗಳವಾರ ಮಹಾರಾಷ್ಟ್ರದ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಬಾಂಬ್‌ ಬೆದರಿಕೆಯ ಸಂದೇಶ ಬಂದ ಕಾರಣ ತುರ್ತು ಭೂಸ್ಪರ್ಶ ಮಾಡಿದ್ದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ. ವಿಮಾನದಲ್ಲಿ 157 ಮಂದಿ ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಇದ್ದರು. ದೆಹಲಿಗೆ ವಿಮಾನ ತೆರಳುವಾಗ ಬೆದರಿಕೆ ಇ–ಮೇಲ್‌ ಸ್ವೀಕರಿಸಲಾಗಿತ್ತು ಎಂದು ಸಂಸ್ಥೆ ಹೇಳಿದೆ.  ಮಾರ್ಗ ಮಧ್ಯೆ ಪ್ರಕ್ಷುಬ್ಧತೆ:  ಉತ್ತರ ಗೋವಾದಿಂದ ಲಖನೌಗೆ ತೆರಳುತ್ತಿದ್ದ ಇಂಡಿಗೋ ವಿಮಾನವೂ ಪ್ರತಿಕೂಲ ಹವಾಮಾನದಿಂದಾಗಿ ಮಾರ್ಗ ಮಧ್ಯೆಯೇ ಪ್ರಕ್ಷುಬ್ಧತೆ (ಟರ್ಬ್ಯೂಲೆನ್ಸ್) ಎದುರಿಸಿದೆ. ತಕ್ಷಣವೇ ಪೈಲಟ್‌ ಹಾಗೂ ವಿಮಾನದ ಸಿಬ್ಬಂದಿ ಜಾಗರೂಕರಾಗಿ ಪರಿಸ್ಥಿತಿ ನಿಭಾಯಿಸಿದ್ದು ಬಳಿಕ ವಿಮಾನವು ಸುರಕ್ಷಿತವಾಗಿ ಲಖನೌನಲ್ಲಿ ಲ್ಯಾಂಡ್‌ ಆಗಿದೆ. ಮುಂಗಾರು ಅವಧಿಯಾಗಿರುವ ಕಾರಣ ಹವಾಮಾನ ವೈಪರೀತ್ಯದಿಂದಾಗಿ ಈ ಸಮಸ್ಯೆ ಎದುರಾಗಿದೆ ಎಂದು ಇಂಡಿಗೋ ತಿಳಿಸಿದೆ. 

ವಿಮಾನ ವಿಳಂಬ: ಸಂಸದೆ ಸುಪ್ರಿಯಾ ಗರಂ

ದೆಹಲಿ–ಮುಂಬೈ ಏರ್‌ ಇಂಡಿಯಾ ‘ಎಐ2971’ ವಿಮಾನ ಸಂಚಾರವು ವಿಳಂಬವಾಗಿದ್ದು ಈ ಬಗ್ಗೆ ಎನ್‌ಸಿಪಿ (ಎಸ್‌ಪಿ) ನಾಯಕಿ ಸಂಸದೆ ಸುಪ್ರಿಯಾ ಸುಳೆ ಕಿಡಿಕಾರಿದ್ದಾರೆ. ಏರ್‌ ಇಂಡಿಯಾದ ಸೇವೆಗಳ ಕುರಿತು ‘ಎಕ್ಸ್‌’ನಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ಅವರು ‘ಕಳಪೆ ನಿರ್ವಹಣೆ ಮತ್ತು ವಿಳಂಬ ಏರ್‌ ಇಂಡಿಯಾಗೆ ಸಾಮಾನ್ಯವಾಗಿಬಿಟ್ಟಿದೆ’ ಎಂದಿದ್ದಾರೆ. ಅಲ್ಲದೇ ಈ ವಿಮಾನದಲ್ಲಿ ನಾನೂ ಪ್ರಯಾಣಿಸಬೇಕಿದ್ದು 3 ಗಂಟೆ ವಿಳಂಬವಾಗಿದೆ. ಆದರೂ ಸಂಸ್ಥೆಯಿಂದ ಯಾವುದೇ ಸ್ಪಷ್ಟ ಸಂವಹನವಾಗಲಿ ಸಹಾಯವಾಗಲಿ ದೊರೆತಿಲ್ಲ. ಪ‍್ರಯಾಣಿಕರನ್ನು ಅಸಹಾಯಕ ಸ್ಥಿತಿಗೆ ದೂಡಲಾಗಿದೆ. ಇದು ಸರಿಯಲ್ಲ ಎಂದು ನಾಗರಿಕ ವಿಮಾನಯಾನ ಸಚಿವ ರಾಮ ಮೋಹನ ನಾಯ್ಡು ಹಾಗೂ ಟಾಟಾ ಗ್ರೂಪ್‌ ಕಂಪನಿಯನ್ನು ಟ್ಯಾಗ್‌ ಮಾಡಿ ಸುಪ್ರಿಯಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.