ADVERTISEMENT

ಉಗ್ರರ ಕೊಲ್ಲುವುದು ಉದ್ದೇಶವಾಗಿರಲಿಲ್ಲ: ಅಹ್ಲುವಾಲಿಯಾ

ವಾಯುದಾಳಿ: ರಾಜಕೀಯ ನೇತಾರರ ವಾಗ್ದಾಳಿ

ಪಿಟಿಐ
Published 3 ಮಾರ್ಚ್ 2019, 20:15 IST
Last Updated 3 ಮಾರ್ಚ್ 2019, 20:15 IST
ಕೇಂದ್ರ ಸಚಿವ ಎಸ್‌.ಎಸ್‌. ಅಹ್ಲುವಾಲಿಯಾ
ಕೇಂದ್ರ ಸಚಿವ ಎಸ್‌.ಎಸ್‌. ಅಹ್ಲುವಾಲಿಯಾ   

ಕೋಲ್ಕತ್ತ: ಶತ್ರು ದೇಶದೊಳಗೆ ನುಗ್ಗುವ ಸಾಮರ್ಥ್ಯ ಇದೆ ಎಂಬುದನ್ನು ತೋರಿಸುವುದು ವಾಯು ದಾಳಿಯ ಉದ್ದೇಶವಾಗಿತ್ತೇ ಹೊರತು ಜನರನ್ನು ಕೊಲ್ಲುವುದಲ್ಲ ಎಂದು ಕೇಂದ್ರ ಸಚಿವ ಎಸ್‌.ಎಸ್‌. ಅಹ್ಲುವಾಲಿಯಾ ಹೇಳಿದ್ದಾರೆ.

ಪಾಕಿಸ್ತಾನದ ಬಾಲಾಕೋಟ್‌ ಮೇಲೆ ನಡೆಸಲಾದ ವಾಯುದಾಳಿಯಲ್ಲಿ ಜನರು ಸತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಾಗಲಿ, ಸರ್ಕಾರವಾಗಲಿ ಹೇಳಿಲ್ಲ. ಭಾರತದ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳೇ ಉಗ್ರರು ಸತ್ತಿದ್ದಾರೆ ಎಂಬ ವರದಿಗಳನ್ನು ಪ್ರಕಟಿಸಿದವು. ಈ ವರದಿಗಳಿಗೆ ಯಾವುದೇ ಆಧಾರ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

‘ಭಾರತ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳ ವರದಿಗಳನ್ನು ನಾನು ನೋಡಿದ್ದೇನೆ. ಮೋದಿಯವರು ಏನು ಹೇಳಿದ್ದಾರೆ ಎಂಬುದನ್ನೂ ಕೇಳಿಸಿಕೊಂಡಿದ್ದೇನೆ. ವಾಯುದಾಳಿಯ ಬಳಿಕ ಮೋದಿ ಅವರು ರ‍್ಯಾಲಿಯಲ್ಲಿ ಮಾತನಾಡಿದ್ದಾರೆ. ಅಲ್ಲಿ ಅವರು ಸಾವಿನ ಸಂಖ್ಯೆಯ ಬಗ್ಗೆ ಏನನ್ನೂ ಹೇಳಿಲ್ಲ. ಮೋದಿ ಅವರು ಅಥವಾ ಸರ್ಕಾರದ ವಕ್ತಾರರು ಅಥವಾ ನಮ್ಮ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರು ಸಾವಿನ ಸಂಖ್ಯೆ ಎಷ್ಟು ಎಂಬುದನ್ನು ಹೇಳಿದ್ದಾರೆಯೇ ಎಂದು ಕೇಳಲು ನಾನು ಬಯಸುತ್ತೇನೆ’ ಎಂದು ಅಹ್ಲುವಾಲಿಯಾ ಹೇಳಿದ್ದಾರೆ.

ADVERTISEMENT

ಅಹ್ಲುವಾಲಿಯಾ ಅವರ ಹೇಳಿಕೆಯ ವಿಡಿಯೊವನ್ನು ಸಿಪಿಎಂ ತನ್ನ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದೆ. ‘ಪಾಕಿಸ್ತಾನದಲ್ಲಿದ್ದ ಭಯೋತ್ಪಾದಕ ಶಿಬಿರವನ್ನು ನಾಶ ಮಾಡಲಾಗಿದೆ ಎಂಬ ಹೇಳಿಕೆಯಿಂದ ಸರ್ಕಾರ ಹಿಂದೆ ಸರಿಯುತ್ತಿದೆಯೇ’ ಎಂದು ಪ್ರಶ್ನಿಸಿದೆ.

ಈ ಬಗ್ಗೆ ಅಹ್ಲುವಾಲಿಯಾ ಅವರನ್ನು ಪ್ರಶ್ನಿಸಿದಾಗ, ಸರ್ಕಾರದ ಅಧಿಕಾರಿಗಳು ಅಥವಾ ಕೇಂದ್ರದ ಸಚಿವರು ಸಾವಿನ ಸಂಖ್ಯೆ ಎಷ್ಟು ಎಂಬುದನ್ನು ಹೇಳಿಲ್ಲ ಎಂದು ಪುನರುಚ್ಚರಿಸಿದ್ದಾರೆ.

‘ಸರ್ಕಾರದ ಹೇಳಿಕೆಯ ಜತೆಗೆ ನಿಲ್ಲುವಿರೋ ಅಥವಾ 350 ಉಗ್ರರು ಸತ್ತಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಬೆಂಬಲಿಸುತ್ತೀರೊ ಎಂಬ ಪ್ರಶ್ನೆಯನ್ನು ನನಗೆ ಕೇಳಲಾಗಿತ್ತು. ನಾನು ಸರ್ಕಾರದ ಜತೆಗೆ ನಿಲ್ಲುತ್ತೇನೆ. ಮಾಧ್ಯಮ ವರದಿಗಳನ್ನು ಬೆಂಬಲಿಸುವುದು ಹೇಗೆ ಸಾಧ್ಯ’ ಎಂದು ಅವರು ಹೇಳಿದ್ದಾರೆ.

ಉಗ್ರರ ತರಬೇತಿ ಶಿಬಿರವನ್ನು ಭಾರತದ ವಾಯುಪಡೆ ನಾಶ ಮಾಡಿದೆ ಎಂಬುದಕ್ಕೆ ಪುರಾವೆ ಕೊಡಬೇಕು. ಈ ಕಾರ್ಯಾಚರಣೆ ವಿವರಗಳನ್ನು ತಿಳಿಯಲು ವಿರೋಧ ಪಕ್ಷಗಳು ಬಯಸುತ್ತಿವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಹೇಳಿದ್ದರು.

ವಿವರ ಕೇಳುವುದು ದೇಶದ್ರೋಹವೇ: ಮೆಹಬೂಬಾ ಪ್ರಶ್ನೆ

ಶ್ರೀನಗರ: ಬಾಲಾಕೋಟ್‌ ದಾಳಿಯ ಹಿಂದಿನ ಸತ್ಯ ಏನು ಎಂಬುದನ್ನು ಪ್ರಶ್ನಿಸುವವರನ್ನು ದೇಶದ್ರೋಹಿಗಳು ಎಂದು ಹೇಳುತ್ತಿರುವುದು ದಿಗ್ಭ್ರಮೆ ಮೂಡಿಸುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಜನರನ್ನು ಕಾಡುತ್ತಿರುವ ವಿಚಾರಗಳಾದ ನಿರುದ್ಯೋಗ, ಕೃಷಿ ಕ್ಷೇತ್ರದ ಸಂಕಷ್ಟಗಳು, ನೋಟು ರದ್ದತಿ, ಜಿಎಸ್‌ಟಿಯೇ ಚುನಾವಣಾ ವಿಚಾರವಾಗಿ ಉಳಿಯಬೇಕು. ಅದರ ಬದಲಿಗೆ ವಾಯುದಾಳಿಯನ್ನು ಚುನಾವಣಾ ವಿಚಾರವಾಗಿಸುವ ಬಲೆಗೆ ವಿರೋಧ ಪಕ್ಷಗಳು ಬೀಳಬಾರದು ಎಂದು ಅವರು ಕಿವಿಮಾತು ಹೇಳಿದ್ದಾರೆ.

‘ದಾಳಿಯ ಕುರಿತು ಭಾರತ ಸರ್ಕಾರವು ದ್ವಂದ್ವಮಯ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಬಾಲಾಕೋಟ್‌ ಕಾರ್ಯಾಚರಣೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಹಕ್ಕು ದೇಶದ ಪ್ರತಿ ಪ್ರಜೆಗೂ ಇದೆ. ಹೀಗೆ ಪ್ರಶ್ನಿಸುವುದು ಶತ್ರುವಿಗೆ ಹೇಗೆ ನೆರವು ನೀಡುತ್ತದೆ? ಇದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ಈ ವಿಚಾರವನ್ನು ಮುಂದಿಟ್ಟು ಚುನಾವಣಾ ಲಾಭ ಮಾಡಿಕೊಳ್ಳಲು ಅವರು (ಬಿಜೆಪಿ ಮುಖಂಡರು) ಬಯಸುತ್ತಿದ್ದಾರೆ’ ಎಂದು ಮೆಹಬೂಬಾ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.