
ಅಜಿತ್ ದೋಬಾಲ್
ಪಿಟಿಐ ಚಿತ್ರ
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಭಾರತವನ್ನು ಬೆದರಿಸಲು ಸಾಧ್ಯವಿಲ್ಲ ಎಂಬುದಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಈ ಹಿಂದೆ ಸ್ಪಷ್ಟ ಸಂದೇಶ ರವಾನಿಸಿದ್ದರು ಎಂದು ವರದಿಯಾಗಿದೆ.
ಭಾರತವು, ಅಮೆರಿಕದೊಂದಿಗೆ ಇದೇ ವಾರ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದ ದಾಖಲೆಗಳನ್ನು ಅಂತಿಮಗೊಳಿಸುತ್ತಿರುವ ಹೊತ್ತಿನಲ್ಲಿ 'ಬ್ಲೂಮ್‌ಬರ್ಗ್' ವರದಿ ಪ್ರಕಟವಾಗಿದೆ. ಅಮೆರಿಕದೊಂದಿಗೆ ವಾಣಿಜ್ಯ ಒಪ್ಪಂದ ಮಾಡಿಕೊಳ್ಳುವುದಕ್ಕಾಗಿ ಟ್ರಂಪ್ ಅವಧಿ ಮುಗಿಯುವವರೆಗೆ ಕಾಯುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಆಡಳಿತವು ಸಿದ್ಧವಿತ್ತು. ಅದನ್ನು ಅಮೆರಿಕಕ್ಕೂ ತಿಳಿಸಲಾಗಿತ್ತು ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.
ವರದಿ ಪ್ರಕಾರ, ಅಜಿತ್ ದೋಬಾಲ್ ಅವರು ಅಮೆರಿಕ ರಾಜ್ಯ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆಸಿದ್ದ ಸಭೆ ವೇಳೆ, ಟ್ರಂಪ್ ಅಥವಾ ಅವರ ಉನ್ನತ ಅಧಿಕಾರಿಗಳು ಭಾರತವನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು ಎನ್ನಲಾಗಿದೆ.
ಅಮೆರಿಕದ ಆಡಳಿತದಿಂದ ಪ್ರತಿಕೂಲ ಪರಿಣಾಮಗಳು ಎದುರಾಗಿರುವ ಕಾರಣ, ವಾಣಿಜ್ಯ ಒಪ್ಪಂದ ಮಾಡಿಕೊಳ್ಳುವುದಕ್ಕಾಗಿ ಟ್ರಂಪ್ ಅವಧಿ ಮುಕ್ತಾಯವಾಗುವವರೆಗೆ ಕಾಯಲು ಮೋದಿ ಸರ್ಕಾರ ಸಿದ್ಧವಾಗಿದೆ. ಟ್ರಂಪ್ ಹಾಗೂ ಅವರ ಆಪ್ತ ಸಹಾಯಕರು ಭಾರತದ ವಿರುದ್ಧ ಮಾಡುತ್ತಿರುವ ಸಾರ್ವಜನಿಕ ಟೀಕೆಗಳಿಗೆ ಕಡಿವಾಣ ಹಾಕಬೇಕು. ಉಭಯ ದೇಶಗಳ ನಡುವಣ ಸಂಬಂಧವನ್ನು ಸರಿದಾರಿಗೆ ತರಲು ಭಾರತ ಬಯಸುತ್ತಿದೆ ಎಂದು ದೋಬಾಲ್ ಅವರು ರೂಬಿಯೊ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.