ಮನೋಹರ್ ಪರಿಕ್ಕರ್ ಮತ್ತು ಅಜಿತ್ ಪವಾರ್
–ಪಿಟಿಐ ಚಿತ್ರಗಳು
ಮುಂಬೈ: ಇತ್ತೀಚೆಗಷ್ಟೇ ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣ ಅವರಿಗೆ ಧಮಕಿ ಹಾಕಿ ವಿವಾದಕ್ಕೀಡಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಇದೀಗ ‘ಪರಿಕ್ಕರ್ ಯಾರು?’ ಎಂದು ಪ್ರಶ್ನಿಸುವ ಮೂಲಕ ಮತ್ತೊಮ್ಮೆ ಮುಜುಗರಕ್ಕೀಡಾಗಿದ್ದಾರೆ.
ಅಜಿತ್ ಪವಾರ್ ಅವರು ಪುಣೆ ಮಹಾನಗರ ಪಾಲಿಕೆ ಆಯುಕ್ತ ಮತ್ತು ಆಡಳಿತಾಧಿಕಾರಿ ನವಲ್ ಕಿಶೋರ್ ರಾಮ್ ಅವರೊಂದಿಗೆ ಕೇಶವ ನಗರಕ್ಕೆ ಭಾನುವಾರ ಭೇಟಿ ನೀಡಿದ್ದರು. ಸ್ಥಳಕ್ಕೆ ತಡವಾಗಿ ಆಗಮಿಸಿದ್ದಕ್ಕೆ ಕ್ಷಮೆ ಕೋರಿದ ಪವಾರ್, ಸಂಚಾರ ದಟ್ಟಣೆ ಸೇರಿದಂತೆ ನಾಗರಿಕರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.
ಈ ವೇಳೆ ಮಹಿಳೆಯೊಬ್ಬರು, ‘ಪರಿಕ್ಕರ್ ಸಾಹೇಬರು ನೀಡುತ್ತಿದ್ದ ಅನಿರೀಕ್ಷಿತ ಭೇಟಿಯಂತೆ... ನೀವು ಅಥವಾ ಯಾರಾದರೂ ಸಂಚಾರ ದಟ್ಟಣೆ ಸಮಯದಲ್ಲಿ ಆ ಪ್ರದೇಶಕ್ಕೆ ಭೇಟಿ ನೀಡಬೇಕು’ ಎಂದು ಸಲಹೆ ನೀಡಿದ್ದಾರೆ. ಇದರಿಂದ ದಿಗ್ಭ್ರಮೆಗೊಂಡ ಪವಾರ್, ‘ಪರಿಕ್ಕರ್ ಯಾರು’ ಎಂದು ಪ್ರಶ್ನಿಸಿದ್ದಾರೆ.
‘ದಿವಂಗತ ಮನೋಹರ್ ಪರಿಕ್ಕರ್ ಬಿಜೆಪಿ ನಾಯಕ ಹಾಗೂ ಗೋವಾದ ಮಾಜಿ ಮುಖ್ಯಮಂತ್ರಿ’ ಎಂದು ಮಹಿಳೆ ಉತ್ತರಿಸಿದರು.
‘ಮಿಸ್ಟರ್ ಕ್ಲೀನ್’, ‘ಸಾಮಾನ್ಯ ವ್ಯಕ್ತಿ’ ಎಂದೇ ಪ್ರಸಿದ್ಧರಾಗಿದ್ದ ಮನೋಹರ್ ಪರಿಕ್ಕರ್ ಮೂರು ಬಾರಿ ಗೋವಾದ ಮುಖ್ಯಮಂತ್ರಿಯಾಗಿದ್ದರು. ನರೇಂದ್ರ ಮೋದಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಈಚೆಗೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಕರ್ತವ್ಯ ನಿರತ ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣ ಅವರಿಗೆ ಧಮಕಿ, ಛೀಮಾರಿ ಹಾಕಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ವಿವಾದಕ್ಕೀಡಾಗಿತ್ತು.
ಸೋಲಾಪುರದ ಮೇಧಾ ತಾಲ್ಲೂಕಿನ ಕುದ್ರು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಅಕ್ರಮವಾಗಿ ಕಲ್ಲುಮಿಶ್ರಿತ ಮಣ್ಣನ್ನು ಬಳಸಿಕೊಂಡಿದ್ದರ ವಿರುದ್ಧ ಕ್ರಮವಹಿಸಲು ಅಂಜನಾ ಕೃಷ್ಣಾ ತೆರಳಿದ್ದರು. ಎನ್‌ಸಿಪಿಯ ಸ್ಥಳೀಯ ಕಾರ್ಯಕರ್ತರೊಬ್ಬರು ಸ್ಥಳದಲ್ಲೇ ಅಜಿತ್ ಪವಾರ್ ಅವರಿಗೆ ಕರೆ ಮಾಡಿ, ಉಪ ಮುಖ್ಯಮಂತ್ರಿ ಜತೆಗೆ ನೇರವಾಗಿ ಮಾತನಾಡುವಂತೆ ಅಧಿಕಾರಿಯ ಕೈಗೆ ಮೊಬೈಲ್ ಕೊಟ್ಟಿದ್ದರು. ಅಧಿಕಾರಿಯನ್ನು ಉದ್ದೇಶಿಸಿ ‘ಎಷ್ಟು ಧೈರ್ಯ ನಿನಗೆ? ಎಂದು ಅಜಿತ್ ಪವಾರ್ ಜೋರು ಧ್ವನಿಯಲ್ಲಿ ಪ್ರಶ್ನಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.