ADVERTISEMENT

ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನಕ್ಕೆ ರನ್‌ವೇ ಅಸ್ಪಷ್ಟ ಗೋಚರತೆ ಕಾರಣ?

ಪಿಟಿಐ
Published 29 ಜನವರಿ 2026, 6:01 IST
Last Updated 29 ಜನವರಿ 2026, 6:01 IST
<div class="paragraphs"><p>ಅಜಿತ್ ಪವಾರ್</p></div>

ಅಜಿತ್ ಪವಾರ್

   

– ಪಿಟಿಐ ಚಿತ್ರ

ಪುಣೆ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ, ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್‌ (66) ಮತ್ತು ಇತರ ನಾಲ್ವರು ಪ್ರಯಾಣಿಸುತ್ತಿದ್ದ ಲಘು ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಅಪಘಾತಕ್ಕೆ ನಿಖರ ಖಾರಣ ಏನು ಎಂಬುದು ತಿಳಿದು ಬಂದಿಲ್ಲ. ಅದಾಗ್ಯೂ ಅಜಿತ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನಕ್ಕೆ ರನ್‌ವೇ ಅಸ್ಪಷ್ಟ ಗೋಚರತೆ ಕಾರಣ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ

ADVERTISEMENT

ಅಸ್ಪಷ್ಟ ಗೋಚರತೆಯ ಕಾರಣ ವಿಮಾನ ನಿಲ್ದಾಣದ ಮೇಲೆ ಒಮ್ಮೆ ‘ಗೋ– ಅರೌಂಡ್‌’ (ಸುತ್ತು ಹಾಕಿದ) ಹಾಕಿದ ಬಳಿಕ ವಿಮಾನಕ್ಕೆ ಇಳಿಯಲು ಅನುಮತಿ ನೀಡಲಾಯಿತು. ಆದರೆ ಅನುಮತಿಯ ಸಂದೇಶ ಪಡೆದ ಬಗ್ಗೆ ಪೈಲಟ್‌ನಿಂದ ಅಂತಿಮವಾಗಿ ಯಾವುದೇ ‘ರೀಡ್‌ಬ್ಯಾಕ್‌’ (ದೃಢೀಕರಣ) ಬರಲಿಲ್ಲ ಕೆಲ ಕ್ಷಣಗಳಲ್ಲಿಯೇ ರನ್‌ವೇ ಅಂಚಿನಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ. 

ವಿಮಾನ ಅಪಘಾತಕ್ಕೀಡಾದ ಅಂತಿಮ ಕ್ಷಣಗಳ ವಿವರವನ್ನು ಸಚಿವಾಲಯ ಹಂಚಿಕೊಂಡಿದೆ. ಬಾರಾಮತಿ ವಾಯು ಸಂಚಾರ ನಿಯಂತ್ರಣದ ಪ್ರಕಾರ ವಿಮಾನವು ಬೆಳಿಗ್ಗೆ 8.18ಕ್ಕೆ ಸಂಪರ್ಕಕ್ಕೆ ಬಂದಿತ್ತು. ನಂತರ ಅದು ಬಾರಾಮತಿಗೆ 30 ನಾಟಿಕಲ್‌ ಮೈಲುಗಳಷ್ಟು ದೂರದಲ್ಲಿದ್ದಾಗ ಅದರಿಂದ ಕರೆ ಸ್ವೀಕರಿಸಲಾಗಿತ್ತು. ಈ ವೇಳೆ ಗೋಚರತೆಯನ್ನು ಆಧರಿಸಿ ತಮ್ಮ ವಿವೇಚನೆ ಬಳಸಿ ವಿಮಾನ ಇಳಿಸುವಂತೆ ಪೈಲಟ್‌ಗೆ ಸೂಚಿಸಲಾಯಿತು.  ಬಳಿಕ ರನ್‌ವೇ ಗೋಚರಿಸದ ಬಗ್ಗೆ ವಿಮಾನದ ಸಿಬ್ಬಂದಿಯಿಂದ ವರದಿ ಬಂದಿತು. ನಂತರ ಪೈಲಟ್‌ ಮತ್ತೆ ‘ಗೋ– ಅರೌಂಡ್‌’ ಪ್ರಾರಂಭಿಸಿದರು. ಸುತ್ತಾಟದ ಬಳಿಕ ರನ್‌ವೇಯನ್ನು ಗುರುತಿಸಬಹುದೇ ಎಂದು ಕೇಳಲಾಯಿತು. ಆಗ ಪ್ರತಿಕ್ರಿಯಿಸಿದ ಪೈಲಟ್‌ ‘ರನ್‌ವೇ ಗೋಚರಿಸುತ್ತಿಲ್ಲ ಗೋಚರಿಸದ ಬಳಿಕ ತಿಳಿಸುತ್ತೇನೆ’ ಎಂದು ಹೇಳಿದ್ದರು. ಕೆಲ ಸೆಕೆಂಡುಗಳಲ್ಲಿಯೇ ವಿಮಾನ ಸಿಬ್ಬಂದಿಯು ರನ್‌ವೇಯನ್ನು ಗುರುತಿಸಬಹುದು ಎಂದು ವರದಿ ಮಾಡಿದರು.  ಅದರ ಬೆನ್ನಲ್ಲೇ ರನ್‌ವೇಯತ್ತ ಇಳಿಯಲು ವಿಮಾನ ಮುಂದಾಯಿತು. ಕೂಡಲೇ ವಿಮಾನ ಭೂ ಸ್ಪರ್ಶಕ್ಕೆ ಅನುಮತಿ ನೀಡಲಾಯಿತು. ಆದರೆ ಆ ಕಡೆಯಿಂದ ಸಂದೇಶ ಪಡೆದ ಯಾವುದೇ ದೃಢೀಕರಣ ಎಟಿಸಿಗೆ ಬರಲಿಲ್ಲ. ಕೆಲ ಸೆಕೆಂಡುಗಳಲ್ಲಿಯೇ ರನ್‌ವೇ ಬಳಿ ಬೆಂಕಿ ಕಾಣಿಸಿಕೊಂಡಿತು ಎಂದು ಪ್ರಕಟಣೆ ತಿಳಿಸಿದೆ.  

‘ಗೋ– ಅರೌಂಡ್‌’ ಎಂಬುದು ವಿಮಾನಯಾನ ಪರಿಭಾಷೆಯಲ್ಲಿ ಬಳಸುವ ಪ್ರಮಾಣಿತ ಕಾರ್ಯವಿಧಾನ. ವಿಮಾನ ಭೂಸ್ಪರ್ಶಿಸಲು ಸಾಧ್ಯವಾಗದೇ ಇದ್ದಾಗ ಪೈಲಟ್‌ ವಿಮಾನವನ್ನು ಮತ್ತೆ ಮೇಲಕ್ಕೆ ಏರಿಸಿ ಸುತ್ತು ಹಾಕುತ್ತಾರೆ. ಕೆಟ್ಟ ಹವಾಮಾನ ಕಳಪೆ ಗೋಚರತೆ ಅಸ್ಥಿರ ಮಾರ್ಗ ರನ್‌ವೇಯಲ್ಲಿನ ದಟ್ಟಣೆ ಕಾರಣಗಳಿಂದ ವಿಮಾನವನ್ನು ಸುರಕ್ಷಿತವಾಗಿ ಭೂಸ್ಪರ್ಶಿಸಲು ಸಾಧ್ಯವಾಗದಿದ್ದಾಗ ಇದನ್ನು ಬಳಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.