ADVERTISEMENT

ಅಜಿತ್‌ ಪವಾರ್‌: ಸಕ್ಕರೆ ಕಣದ ಅಕ್ಕರೆಯ ನಾಯಕ

ಪಿಟಿಐ
Published 28 ಜನವರಿ 2026, 23:35 IST
Last Updated 28 ಜನವರಿ 2026, 23:35 IST
   

ಮುಂಬೈ: ‘ಸದಾ ವಧುವಿನ ಸಖಿ, ಖುದ್ದು ಎಂದಿಗೂ ವಧು ಆಗಲಾರಳು’ ಎಂಬ ನಾಣ್ನುಡಿ ಅಜಿತ್‌ ಪವಾರ್‌ (66) ಅವರ ರಾಜಕೀಯ ಜೀವನಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ.

ಆರು ಬಾರಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಸಿದ್ದ  ಪವಾರ್‌ ಅವರಿಗೆ ಒಮ್ಮೆಯೂ ಮುಖ್ಯಮಂತ್ರಿ ಕುರ್ಚಿಯನ್ನು ಅಲಂಕರಿಸುವ ಭಾಗ್ಯ ಒಲಿಯಲಿಲ್ಲ. ಮುಖ್ಯಮಂತ್ರಿ ಆಗಬಹುದಿತ್ತು, ಆದರೆ, ಅವರ ವಿಷಯದಲ್ಲಿ ಹಾಗೆ ಆಗಲಿಲ್ಲ. ಅವರು ಕೊನೆಯವರೆಗೂ ವಧುವಿನ ಸಖಿಯಾಗಿಯೇ ಉಳಿದರು.

ಆಶಾ ಮತ್ತು ಅನಂತರಾವ್‌ ದಂಪತಿಗೆ 1959ರ ಜುಲೈ 22ರಂದು ಜನಿಸಿದ್ದ ಪವಾರ್‌, ದೊಡ್ಡಪ್ಪ ಶರದ್‌ ಪವಾರ್‌ ಅವರ ಹೆಜ್ಜೆ ಗುರುತುಗಳನ್ನು ಅನುಸರಿಸಿ, 1982ರಲ್ಲಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದರು. 

ADVERTISEMENT

1991ರಲ್ಲಿ ಬಾರಾಮತಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಪವಾರ್‌, ನಂತರ ಈ ಕ್ಷೇತ್ರವನ್ನು ತಮ್ಮ ದೊಡ್ಡಪ್ಪನಿಗೆ ಬಿಟ್ಟುಕೊಟ್ಟರು. ಶರದ್‌ ಪವಾರ್‌ ಅವರು ಪಿ.ವಿ ನರಸಿಂಹರಾವ್‌ ಸರ್ಕಾರದಲ್ಲಿ ರಕ್ಷಣಾ ಸಚಿವರಾದರು. 1991ರಿಂದ 8 ಬಾರಿ ಅಜಿತ್‌ ಪವಾರ್‌ ಬಾರಾಮತಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 

ತಳಮಟ್ಟದ ರಾಜಕಾರಣಿಯಾಗಿದ್ದ ಪವಾರ್‌, ಆಡಳಿತದಲ್ಲಿ ಕುಶಾಗ್ರಮತಿಯಾಗಿಯೂ ಹೆಸರಾಗಿದ್ದರು. ಮುಖ್ಯಮಂತ್ರಿ ಆಗಬೇಕು ಎಂಬ ಆಸೆಯನ್ನು ಅವರೆಂದೂ ಮರೆಮಾಚಿರಲಿಲ್ಲ. 2019ರಲ್ಲಿ  ದೇವೇಂದ್ರ ಫಡಣವೀಸ್‌ ಮುಖ್ಯಮಂತ್ರಿಯಾದಾಗ ಕೇವಲ 2 ದಿನಗಳ ಮಟ್ಟಿಗೆ ಅವರು ಉಪ ಮುಖ್ಯಮಂತ್ರಿ ಆಗಿದ್ದರು. ಈ ಸರ್ಕಾರ ಕೇವಲ ಎರಡು ದಿನ ಇತ್ತು. ಕಾಂಗ್ರೆಸ್‌, ಶಿವಸೇನಾ, ಬಿಜೆಪಿ ಸರ್ಕಾರದಲ್ಲೂ ಉಪ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಹೆಗ್ಗಳಿಕೆ ಅವರದು. 

ದೊಡ್ಡಪ್ಪ, ಎನ್‌ಸಿಪಿ ಸ್ಥಾಪಕ ಶರದ್‌ ಪವಾರ್‌ ವಿರುದ್ಧ 2023ರಲ್ಲಿ ಬಂಡೆದ್ದು ಅವರ ನೆರಳಿನಿಂದ ಹೊರಬಂದಿದ್ದ ಅಜಿತ್‌ ಪವಾರ್‌, ಪಕ್ಷದ ಚಿಹ್ನೆ, ಹೆಸರಿನ ಜತೆಗೆ ಬಹುತೇಕ ಶಾಸಕರನ್ನು ಕರೆದುಕೊಂಡು ಬಿಜೆಪಿ ಮತ್ತು ಶಿವಸೇನಾ ಮೈತ್ರಿ ಸರ್ಕಾರ ಸೇರಿದ್ದರು. 

ಪವಾರ್‌ ಅವರ ರಾಜಕೀಯ ಜೀವನವು ಹಲವು ತಿರುವುಗಳಿಂದ ಕೂಡಿತ್ತು. ಆದರೆ, ಅವರು ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತರು. ಇತ್ತೀಚೆಗೆ ಅವರ ಪುತ್ರ, ಪಾರ್ಥ್‌ ಪವಾರ್‌ ಒಡೆತನದ ಕಂಪನಿಯು, ಮುದ್ರಾಂಕ ಶುಲ್ಕವನ್ನು ವಂಚಿಸಿ, ಪುಣೆಯ ಮುಂಧ್ವಾ ಪ್ರದೇಶದಲ್ಲಿರುವ ಸುಮಾರು ₹1,800 ಕೋಟಿ ಮೌಲ್ಯದ 40 ಎಕರೆ ಜಮೀನನ್ನು  ಕೇವಲ ₹300 ಕೋಟಿಗೆ ಅಕ್ರಮವಾಗಿ ಖರೀದಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ‘ಮಹಾ ವಿಕಾಸ್‌ ಅಘಾಡಿ’ ಮೈತ್ರಿಕೂಟವು ಪವಾರ್‌ ರಾಜೀನಾಮೆಗೆ ಒತ್ತಾಯಿಸಿತ್ತು. 

ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಅವರ ಪಕ್ಷವು ಕೇವಲ ಒಂದು ಸ್ಥಾನ ಗೆಲ್ಲುವ ಮೂಲಕ ತೀವ್ರ ಹಿನ್ನಡೆ ಅನುಭವಿಸಿತ್ತು. 5 ತಿಂಗಳ ನಂತರ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಒಟ್ಟು 41 ಸ್ಥಾನಗಳನ್ನು ಗೆಲ್ಲುವ ಮೂಲಕ ಪವಾರ್‌ ಟೀಕಾಕಾರರ ಬಾಯಿ ಮುಚ್ಚಿಸಿದ್ದರು.  

ಬಿಜೆಪಿ ಮತ್ತು ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಮೈತ್ರಿಯ ಹೊರತಾಗಿಯೂ, ಅಭಿವೃದ್ಧಿಗಾಗಿ ತಾವು ಆಡಳಿತಾರೂಢ ಮೈತ್ರಿಕೂಟಕ್ಕೆ ಸೇರಿರುವುದಾಗಿ ಪವಾರ್‌ ಒತ್ತಿ ಹೇಳುತ್ತಿದ್ದರು. ವಿಳಂಬಕ್ಕೆ ಕುಖ್ಯಾತರಾಗಿರುವ ಹಲವು ರಾಜಕಾರಣಿಗಳಿಗಿಂತ ಭಿನ್ನರಾಗಿ ಸಮಯನಿಷ್ಠೆಗೆ ಮತ್ತು ಅವಿರತ ದುಡಿಮೆಗೂ  ಪವಾರ್‌ ಹೆಸರಾಗಿದ್ದರು. ಪ್ರೀತಿಯಿಂದ ‘ದಾದಾ’ (ಅಣ್ಣ) ಎಂದು ಕರೆಯಿಸಿಕೊಳ್ಳುತ್ತಿದ್ದ ಅವರು, ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ಮನದ ಭಾವನೆಯನ್ನು ಮುಕ್ತವಾಗಿ ಹಂಚಿಕೊಳ್ಳಲು ಹಿಂಜರಿಯುತ್ತಿರಲಿಲ್ಲ. 

ಹಣಕಾಸು ಮತ್ತು ಯೋಜನಾ ಸಚಿವರೂ ಆಗಿದ್ದ ಪವಾರ್‌, 2026–27ನೇ ಸಾಲಿನ ಬಜೆಟ್‌ ಅನ್ನು ಫೆಬ್ರುವರಿ 23ರಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಬಜೆಟ್‌ ಅಧಿವೇಶನದಲ್ಲಿ ಮಂಡಿಸಬೇಕಿತ್ತು. ಎನ್‌ಸಿಪಿಯ ಎರಡು ಬಣಗಳ ವಿಲೀನದ ಮೂಲಕ ಮಹಾರಾಷ್ಟ್ರದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಲಿವೆ ಎಂಬ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಪವಾರ್‌ ಅವರು ನಿರ್ಗಮಿಸಿದ್ದಾರೆ.

ಕೆಳಗಿಳಿಯುವ ಯತ್ನದಲ್ಲಿ ದುರಂತ: ರಾಮ ಮೋಹನ್‌ ನಾಯ್ಡು 

‘ಡಿಜಿಸಿಎ ಮತ್ತು ಎಎಐಬಿ ತಂಡ ಸ್ಥಳಕ್ಕೆ ಬಂದಿದ್ದು, ದುರಂತಕ್ಕೆ ಕಾರಣವಾದ ಅಂಶಗಳನ್ನು ಪರಿಶೀಲಿಸುತ್ತಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಲ್ಯಾಂಡಿಂಗ್‌ ವೇಳೆ ಅಸ್ಪಷ್ಟ ಗೋಚರತೆಯ ಕಾರಣದಿಂದ ದುರಂತ ಸಂಭವಿಸಿದೆ’ ಎಂದು ಕೇಂದ್ರ ವಿಮಾನಯಾನ ಸಚಿವ ಕೆ. ರಾಮ ಮೋಹನ್‌ ನಾಯ್ಡು ಹೇಳಿದ್ದಾರೆ. 

‘ಬಾರಾಮತಿಯಲ್ಲಿ ಲ್ಯಾಂಡಿಂಗ್‌ಗೆ ಮೊದಲ ಪ್ರಯತ್ನ ನಡೆದಾಗ ಎಟಿಸಿ ಸಿಬ್ಬಂದಿ ಪೈಲಟ್‌ಗೆ ರನ್‌ವೇ ಗೋಚರಿಸುತ್ತಿದೆಯೇ ಎಂದು ಪ್ರಶ್ನಿಸಿದರು. ಅವರ ಉತ್ತರ ನಕಾರಾತ್ಮಕವಾಗಿತ್ತು. ಹಾಗಾಗಿ, ಒಂದು ಸುತ್ತು ಹಾರಾಟ ನಡೆಸಿದ ಬಳಿಕ ಎರಡನೆಯ ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸುವಂತೆ ಸೂಚಿಸಲಾಗಿತ್ತು. ಪೈಲಟ್‌ ಎರಡನೆಯ ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದಾಗ ಎಟಿಸಿ ಸಿಬ್ಬಂದಿ ರನ್‌ವೇ ಗೋಚರಿಸುತ್ತಿದೆಯೇ ಎಂದು ಪ್ರಶ್ನಿಸಿದರು.
ಆಗ ಪೈಲಟ್‌ ನೀಡಿದ ಉತ್ತರ ಸಕಾರಾತ್ಮಕವಾಗಿತ್ತು. ಹಾಗಾಗಿ ಲ್ಯಾಂಡಿಂಗ್‌ಗೆ ಅನುಮತಿ ನೀಡಲಾಯಿತು. ಬೆನ್ನಲ್ಲೇ, ದುರಂತ ಸಂಭವಿಸಿತು. ಡಿಜಿಸಿಎ ಮತ್ತು ಎಎಐಬಿ ತಂಡ ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದು, ಪಾರದರ್ಶಕವಾಗಿ ತನಿಖೆ ನಡೆಯಲಿದೆ’ ಎಂದು ಅವರು ಹೇಳಿದರು.   

ಏನೇನಾಯ್ತು?

  • ಬೆಳಿಗ್ಗೆ 8.18: ಬಾರಾಮತಿ ವಿಮಾನ ನಿಲ್ದಾಣದ ಎಟಿಸಿ (ಏರ್ ಟ್ರಾಫಿಕ್ ಕಂಟ್ರೋಲ್) ಸಂಪರ್ಕಕ್ಕೆ

  • ಬಾರಾಮತಿಯಿಂದ 30 ನಾಟಿಕಲ್ ಮೈಲಿ ದೂರವಿದ್ದಾಗಲೇ ವಿಮಾನ ಸಿಬ್ಬಂದಿಯಿಂದ ಕರೆ. ಹವಾಮಾನ ಪರಿಸ್ಥಿತಿಯನ್ನು ಅವಲೋಕಿಸಿ ಸ್ವಂತ ವಿವೇಚನೆಯಿಂದ ವಿಮಾನವನ್ನು ಕೆಳಗಿಳಿಸುವಂತೆ ಎಟಿಸಿಯಿಂದ ಪೈಲಟ್‌ಗೆ ಸೂಚನೆ

  • ಗಾಳಿಯ ವೇಗ ಮತ್ತು ಗೋಚರತೆಯ ಬಗ್ಗೆ ವಿಮಾನದ ಸಿಬ್ಬಂದಿಯಿಂದ ವಿಚಾರಣೆ. ಗಾಳಿಯ ವೇಗ ಕಡಿಮೆಯಿದೆ, ಗೋಚರತೆ ಸುಮಾರು 3,000 ಮೀಟರ್ ಎಂಬ ಮಾಹಿತಿ ರವಾನಿಸಿದ ಎಟಿಸಿ

  • ರನ್‌ವೇ 11ರಲ್ಲಿ ಇಳಿಯುವುದಾಗಿ ಕೋರಿಕೆ. ರನ್‌ವೇ ಸರಿಯಾಗಿ ಗೋಚರಿಸದ ಕಾರಣ ಆಗಸದಲ್ಲೇ ಹಾರಾಟ ನಡೆಸಿದ ವಿಮಾನ

  • ರನ್‌ವೇ ಗುರುತಿಸಬಹುದೇ ಎಂದು ಮತ್ತೊಮ್ಮೆ ಪ್ರಶ್ನೆ. ಸರಿಯಾಗಿ ಗೋಚರಿಸುತ್ತಿಲ್ಲ, ಸ್ಪಷ್ಟವಾಗಿ ಕಂಡೊಡನೆ ತಿಳಿಸುತ್ತೇವೆ ಎಂಬ ಉತ್ತರ

  • ಬೆಳಿಗ್ಗೆ 8.43: ರನ್‌ವೇ 11ರಲ್ಲಿ ಇಳಿಸಲು ಸೂಚನೆ. ಪ್ರತಿಕ್ರಿಯೆ ನೀಡದ ವಿಮಾನ ಸಿಬ್ಬಂದಿ

  • ಬೆಳಿಗ್ಗೆ 8.44: ರನ್‌ವೇ 11ರ ಬಳಿ ಬೆಂಕಿಯ ಜ್ವಾಲೆ ಗಮನಿಸಿದ ಎಟಿಸಿ. ದುರಂತದ ಸ್ಥಳಕ್ಕೆ ದೌಡಾಯಿಸಿದ ತುರ್ತು ಸೇವೆ ಸಿಬ್ಬಂದಿ

  • ರನ್‌ವೇ ಎಡಭಾಗದಲ್ಲಿ ಬಿದ್ದ ವಿಮಾನದ ಭಗ್ನಾವಶೇಷ

ದುರಂತಕ್ಕೀಡಾದ ವಿಮಾನದ ಮಾಹಿತಿ

  • ವಿಮಾನದ ಮಾಲೀಕರು: ವಿಎಸ್‌ಆರ್‌ ವೆಂಚರ್ಸ್‌ (ನಿಗದಿತವಲ್ಲದ ನಿರ್ವಾಹಕ); ಪರವಾನಗಿ ಸಂಖ್ಯೆ 07/2014

  • ಪರವಾನಗಿ: 2014ರ ಏ.21

  • ಪರವಾನಗಿ ನವೀಕರಣ: 2023ರ ಏ.3, 2028ರ ಏ.20ರವರೆಗೂ ಮಾನ್ಯ

  • ಡಿಜಿಸಿಎಯಿಂದ 2025ರ ಫೆಬ್ರುವರಿಯಲ್ಲಿ ಪರಿಶೀಲನೆ 

  • ದುರಂತಕ್ಕೀಡಾದ ವಿಮಾನದ ತಯಾರಿಕೆ 2010ರಲ್ಲಿ 

  • ವಿಟಿ–ಡಿಬಿಎಲ್‌ ನೋಂದಣಿ ಹೊಂದಿದ್ದ ಲಿಯರ್‌ಜೆಟ್‌–45 ವಿಮಾನವೊಂದು 2023ರ ಸೆ. 14ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅಪಘಾತಕ್ಕೀಡಾಗಿತ್ತು. ಎಎಐಬಿಯಿಂದ ತನಿಖೆ

ವಿಮಾನದಲ್ಲಿದ್ದ ಪೈಲಟ್‌ಗಳ ವಿವರ

  • ಪೈಲಟ್‌ ಇನ್‌ ಕಮಾಂಡ್‌: ಕ್ಯಾಪ್ಟನ್‌ ಸುಮಿತ್‌ ಕಪೂರ್‌ (ಎಪಿಟಿಎಲ್‌ ಹೋಲ್ಡರ್‌)

  • ಹಾರಾಟ ನಡೆಸಿದ ಅವಧಿ: 15 ಸಾವಿರ ಗಂಟೆಗಳಿಗಿಂತಲೂ ಹೆಚ್ಚು 

  • ಕೊನೆಯ ವೈದ್ಯಕೀಯ ಪರೀಕ್ಷೆ: 2025ರ ನ.19, 2026ರ ಮೇ 19ರವರೆಗೂ ಮಾನ್ಯ

  • ಸಹ ಪೈಲಟ್‌: ಶಾಂಭವಿ ಪಾಠಕ್ (ಸಿಪಿಎಲ್ ಹೋಲ್ಡರ್‌)

  • ಹಾರಾಟ ನಡೆಸಿದ ಅವಧಿ: 1.5 ಸಾವಿರ ಗಂಟೆಗಳಿಗಿಂತಲೂ ಹೆಚ್ಚು 

  • ಕೊನೆಯ ವೈದ್ಯಕೀಯ ಪರೀಕ್ಷೆ: 2025ರ ಜುಲೈ 12, 2026ರ ಜುಲೈ 24ರವರೆಗೂ ಮಾನ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.