ADVERTISEMENT

ಮಹಾರಾಷ್ಟ್ರ–ಕರ್ನಾಟಕ ಗಡಿ ವಿವಾದ ಪ್ರಧಾನಿ ಮಧ್ಯಪ್ರವೇಶಕ್ಕೆ ಪವಾರ್ ಆಗ್ರಹ

ಪ್ರಧಾನಿಗೆ ಪತ್ರ ಬರೆದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್

ಪಿಟಿಐ
Published 11 ಆಗಸ್ಟ್ 2021, 11:16 IST
Last Updated 11 ಆಗಸ್ಟ್ 2021, 11:16 IST
ಅಜಿತ್ ಪವಾರ್
ಅಜಿತ್ ಪವಾರ್   

ಮುಂಬೈ: ‘ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ದೀರ್ಘಕಾಲದಿಂದ ಇರುವ ಗಡಿವಿವಾದವನ್ನು ಇತ್ಯರ್ಥಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಬೇಕು’ ಎಂದು ಎನ್‌ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಆಗಸ್ಟ್ 9ರಂದು ಪ್ರಧಾನಿ ಅವರಿಗೆ ಪವಾರ್ ಪತ್ರ ಬರೆದಿದ್ದು, ‘ಮರಾಠಿ ಮಾತನಾಡುವ ಜನರ ಮೇಲಿನ ಕರ್ನಾಟಕ ಸರ್ಕಾರದ ‘ದೌರ್ಜನ್ಯ’ವನ್ನು ನಿಲ್ಲಿಸಬೇಕು ಹಾಗೂ ಕರ್ನಾಟಕದ ವಿವಾದಿತ ಪ್ರದೇಶಗಳನ್ನು ರಾಜ್ಯಕ್ಕೆ ಸೇರಿಸಬೇಕು’ ಎಂದೂ ಮನವಿ ಮಾಡಿದ್ದಾರೆ.

‘ಮಹಾರಾಷ್ಟ್ರ ರಾಜ್ಯ ರಚನೆಯಾಗಿ, ಮುಂಬೈ ಅದರ ರಾಜಧಾನಿಯಾಗಿ 60 ವರ್ಷಗಳಾಗಿವೆ. ಆದರೆ, ಬೆಳಗಾವಿ, ಕಾರವಾರ, ಬೀದರ್, ಭಾಲ್ಕಿ, ನಿಪ್ಪಾಣಿ ಸೇರಿದಂತೆ ಕರ್ನಾಟಕದಲ್ಲಿ ಮರಾಠಿ ಮಾತನಾಡುವ ಜನರಿರುವ ಪ್ರದೇಶಗಳು ಇನ್ನೂ ಮಹಾರಾಷ್ಟ್ರಕ್ಕೆ ಸೇರಿಲ್ಲ. ಮಹಾರಾಷ್ಟ್ರದ ಜನರು ಇರುವ ಹಾಗೂ ಗಡಿ ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶಗಳಲ್ಲಿ ವಾಸಿಸುವವರ ಸಮಸ್ಯೆ ಇನ್ನೂ ಬಗೆಹರಿದಿಲ್ಲ’ ಎಂದು ಪತ್ರದಲ್ಲಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಗಡಿಯುದ್ದಕ್ಕೂ ಮರಾಠಿ ಮಾತನಾಡುವ ಪ್ರದೇಶಗಳು ಸೇರಿದಂತೆ ‘ಸಂಯುಕ್ತ ಮಹಾರಾಷ್ಟ್ರ’ದ ಕನಸು ನನಸಾಗುವವರೆಗೂ ಮಹಾರಾಷ್ಟ್ರ ವಿಶ್ರಾಂತಿ ಪಡೆಯುವುದಿಲ್ಲ. ನೀವು (ಮೋದಿ) ಮಹಾರಾಷ್ಟ್ರದ ಜನರ ಆಶಯಗಳನ್ನು ಅರಿತು ನ್ಯಾಯ ಕೊಡಿಸಬೇಕೆಂದು ನಾವು ಕೋರುತ್ತೇವೆ’ ಎಂದು ಪವಾರ್ ಹೇಳಿದ್ದಾರೆ.

‘ಪ್ರಸ್ತುತ ಗಡಿವಿವಾದವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದು, ಈ ನಿಟ್ಟಿನಲ್ಲಿ ಕಾನೂನು ಹೋರಾಟ ನಡೆಯುತ್ತಿದೆ. ಮಹಾರಾಷ್ಟ್ರಕ್ಕೆ ನ್ಯಾಯ ಸಿಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅಜಿತ್ ಪವಾರ್ ಅವರು, ‘ಕರ್ನಾಟಕದ ಗಡಿ ಪ್ರದೇಶಗಳಿಂದ ಮರಾಠಿ ಜನರಿಗೆ ನ್ಯಾಯ ಒದಗಿಸುವುದಕ್ಕಾಗಿ ನಾವು ನಿಮ್ಮ ಸಹಾಯ ಕೋರುತ್ತಿದ್ದೇವೆ. ನೀವು ಅದನ್ನು ಮಾಡುತ್ತೀರಿ ಎಂದು ನನಗೆ ಖಾತ್ರಿಯಿದೆ’ ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ಸೇರಿದಂತೆ ಕೆಲವು ಪ್ರದೇಶಗಳನ್ನು ಮಹಾರಾಷ್ಟ್ರ ತನಗೆ ಸೇರಿದ್ದು ಎಂದು ಹೇಳಿಕೊಂಡಿದೆ. ಈ ಪ್ರದೇಶಗಳಲ್ಲಿ ಹೆಚ್ಚಿನ ಜನರು ಮರಾಠಿ ಮಾತನಾಡುವವರಾಗಿದ್ದಾರೆ. ಬೆಳಗಾವಿ ಮತ್ತು ಇತರ ಗಡಿ ಪ್ರದೇಶಗಳ ಕುರಿತು ಉಭಯ ರಾಜ್ಯಗಳ ನಡುವಿನ ವಿವಾದವು ಹಲವು ವರ್ಷಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.