ಅಖಿಲೇಶ್ ಯಾದವ್
ಕೃಪೆ: ಪಿಟಿಐ
ಲಖನೌ: ಬರೇಲಿಗೆ ತೆರಳುತ್ತಿದ್ದ ತಮ್ಮ ಪಕ್ಷದ ನಿಯೋಗವನ್ನು ಪೊಲೀಸರು ತಡೆದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್, ಉತ್ತರ ಪ್ರದೇಶ ಬಿಜೆಪಿ ಸರ್ಕಾರವು ಪ್ರಜಾಪ್ರಭುತ್ವದ ಹತ್ಯೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಶನಿವಾರ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವು ಸಂವಿಧಾನಬಾಹಿರ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ದೂರಿದ್ದಾರೆ.
'ಬಿಜೆಪಿ ಸರ್ಕಾರ ತನ್ನ ಆಡಳಿತದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಆ ಮೂಲಕ ಸಂವಿಧಾನದ ಮೂಲ ಆಶಯಗಳ ಮೇಲೆ ದಾಳಿ ಮಾಡುತ್ತಿದೆ' ಎಂದು ಕಿಡಿಕಾರಿದ್ದಾರೆ.
ಬರೇಲಿಗೆ ತೆರಳುತ್ತಿದ್ದ ಎಸ್‌ಪಿ ನಾಯಕರ ನಿಯೋಗವನ್ನು ಪೊಲೀಸರು ಶನಿವಾರ ತಡೆದಿದ್ದಾರೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮಾತಾ ಪ್ರಸಾದ್ ಪಾಂಡೆ ಅವರು ಗಲಭೆ ಪೀಡಿತ ಬರೇಲಿಗೆ ತೆರಳಲು ಮುಂದಾಗಿದ್ದರು. ಆದರೆ, ಶನಿವಾರ ಬೆಳಿಗ್ಗೆ ಅವರ ನಿವಾಸದ ಬಳಿಯೇ ಬೀಡುಬಿಟ್ಟಿದ್ದ ಪೊಲೀಸರು, ತಮ್ಮ ಖಾಸಗಿ ವಾಹನದತ್ತ ಹೋಗುತ್ತಿದ್ದ ಪಾಂಡೆ ಅವರನ್ನು ತಡೆದಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎಸ್‌ಪಿ ವಕ್ತಾರ ರಾಜೇಂದ್ರ ಚೌಧರಿ, 'ನಿಯೋಗದಲ್ಲಿದ್ದ ಎಲ್ಲ ನಾಯಕರನ್ನು ಪೊಲೀಸರು ಗೃಹ ಬಂಧನದಲ್ಲಿರಿಸಿದ್ದಾರೆ. ಮಾತಾ ಪ್ರಸಾದ್ ಪಾಂಡೆ, ಸಂಸದರಾದ ಹರೇಂದ್ರ ಮಲಿಕ್, ಇಕ್ರಾ ಹಸನ್ ಚೌಧರಿ, ಜಿಯೌರ್ ರಹಮಾನ್ ಬರ್ಕ್, ಮೋಹಿಬುಲ್ಲಾ ನದ್ವಿ ಮತ್ತು ನೀರಜ್ ಮೌರ್ಯ, ಮಾಜಿ ಸಂಸದರಾದ ವೀರ್‌ಪಾಲ್ ಸಿಂಗ್ ಯಾದವ್, ಪ್ರವೀಣ್ ಸಿಂಗ್ ಅರೋನ್, ಶಿವಚರಣ್ ಕಶ್ಯಪ್, ಶಾಸಕರಾದ ಅತೌರ್ ರಹಮಾನ್, ಶಹಜಿಲ್ ಇಸ್ಲಾಮ್ ಅನ್ಸಾರಿ, ಮಾಜಿ ಸಚಿವರಾದ ಭಾಗವತ್ ಶರಣ್ ಗಂಗ್ವಾರ್, ಪಕ್ಷದ ನಾಯಕರಾದ ಶಮೀಮ್ ಖಾನ್ ಸುಲ್ತಾನಿ, ಶುಭಲೇಶ್ ಯಾದವ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ' ಎಂದು ತಿಳಿಸಿದ್ದಾರೆ.
ಇದು ಖಂಡನೀಯ ಮತ್ತು ನಾಚಿಕೆಗೇಡು ಎಂದು ಅಖಿಲೇಶ್ ಗುಡುಗಿದ್ದಾರೆ.
ಕಳೆದವಾರ 'ಐ ಲವ್ ಮಹಮದ್' ಪ್ರದರ್ಶನ ಮೆರವಣಿಗೆ ವೇಳೆ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಬರೇಲಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.