ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಉತ್ತರ ಪ್ರದೇಶದ ನಗರಾಭಿವೃದ್ಧಿ ಸಚಿವ ಅಶುತೋಷ್ ಟಂಡನ್ ಅವರಿಗೆ ಕೋವಿಡ್– 19 ದೃಢಪಟ್ಟಿದೆ.
ಅಖಿಲೇಶ್ ಯಾದವ್ ಅವರು ಟ್ವೀಟ್ ಮೂಲಕ ಸೋಂಕು ತಗುಲಿರುವುದನ್ನು ಖಚಿತಪಡಿಸಿದ್ದಾರೆ. ‘ನನಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ನಾನು ಮನೆಯಲ್ಲೇ ಪ್ರತ್ಯೇಕ ವಾಸವಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ. ಕೆಲವು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದ ಎಲ್ಲರೂ ಕೊರೊನಾ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಿ. ಸ್ವಲ್ಪ ದಿನಗಳ ಕಾಲ ಮನೆಯಲ್ಲೇ ಪ್ರತ್ಯೇಕವಾಗಿರಿ‘ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಯಾದವ್ ಅವರು ಇತ್ತೀಚೆಗಷ್ಟೇ ಕುಂಭಮೇಳ ನಡೆಯುತ್ತಿರುವ ಹರಿದ್ವಾರಕ್ಕೆ ಭೇಟಿ ನೀಡಿದ್ದು, ಇದೇ ವೇಳೆ ಅಖಾರ ಪರಿಷದ್ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಸೇರಿದಂತೆ ಹಲವು ಧಾರ್ಮಿಕ ಮುಖಂಡರನ್ನು ಭೇಟಿಯಾಗಿದ್ದರು.
ನಗರಾಭಿವೃದ್ಧಿ ಸಚಿವ ಟಂಡನ್, ‘ಕೊರೊನಾ ಸೋಂಕಿನ ಆರಂಭಿಕ ಲಕ್ಷಣಗಳನ್ನು ಗಮನಿಸಿದ ನಂತರ, ನಾನು ಪರೀಕ್ಷೆ ಮಾಡಿಸಿದ್ದು ಕೋವಿಡ್ ಇರುವುದು ದೃಢಪಟ್ಟಿದೆ. ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಪ್ರತ್ಯೇಕವಾಗಿದ್ದೇನೆ. ಕೆಲವು ದಿನಗಳಿಂದ ನನ್ನೊಂದಿಗೆ ಸಂಪರ್ಕದಲ್ಲಿರುವ ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ‘ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.