
ಅಲ್–ಫಲಾಹ್ ವಿಶ್ವವಿದ್ಯಾಲಯ
ಪಿಟಿಐ
ಫರೀದಾಬಾದ್(ಹರಿಯಾಣ): ಬಾಂಬ್ ತಯಾರಿಕಾ ಸಾಮಾಗ್ರಿಗಳ ಪತ್ತೆ ಮತ್ತು ದೆಹಲಿ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಟೋಟಕ್ಕೆ ಸಂಬಂಧಿಸಿದಂತೆ ಹರಿಯಾಣದ ಫರೀದಾಬಾದ್‌ನಲ್ಲಿರುವ ಅಲ್–ಫಲಾಹ್ ವಿಶ್ವವಿದ್ಯಾಲಯ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ವಿಶ್ವವಿದ್ಯಾಲಯದ ಮೂವರು ಸಿಬ್ಬಂದಿ ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದ್ದು, ವಿಶ್ವವಿದ್ಯಾಲಯವು ವೈಟ್ ಕಾಲರ್ ಭಯೋತ್ಪಾದನೆಗೆ ನೆಲೆಯಾಗಿದೆಯೇ? ಎಂಬ ಶಂಕೆ ವ್ಯಕ್ತವಾಗಿದೆ.
ಮಂಗಳವಾರ ದಿನವಿಡಿ ವಿಶ್ವವಿದ್ಯಾಲಯದಲ್ಲಿ ಪರಿಶೀಲನೆ ನಡೆಸಿರುವ ಪೊಲೀಸರು, ಹಲವರನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ತಿಳಿಸಿದ್ದಾರೆ.
ಸೋಮವಾರ ಫರೀದಾಬಾದ್‌ನ ಎರಡು ಬಾಡಿಗೆ ಮನೆ ಮೇಲೆ ದಾಳಿ ನಡೆಸಿದ್ದ ಪೊಲೀಸರು ಅಲ್ಲಿಂದ 2,900 ಕೆ.ಜಿ ಸ್ಪೋಟಕ ಸಾಮಾಗ್ರಿಗಳನ್ನು ವಶಪಡಿಸಿಕೊಂಡು ಹಲವರನ್ನು ಬಂಧಿಸಿದ್ದರು. ಇದಾದ ಕೆಲವೇ ಗಂಟೆಗಳ ನಂತರ ದೆಹಲಿಯ ಕೆಂಪು ಕೋಟೆಯ ಮೆಟ್ರೊ ನಿಲ್ದಾಣದ ಸಮೀಪ ಕಾರೊಂದು ಸ್ಪೋಟಗೊಂಡು 12 ಜನರು ಮೃತಪಟ್ಟಿದ್ದರು.
ಕಾರು ಸ್ಪೋಟಕ್ಕೆ ಸಂಬಂಧಿಸಿದಂತೆ ಶಂಕಿತ ಪುಲ್ವಾಮಾ ಮೂಲದ ವೈದ್ಯ ಮೊಹಮ್ಮದ್ ಉಮರ್ ನಬಿಯನ್ನು ಬಂಧಿಸಲಾಗಿದೆ. ಈತ ಇದೇ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದನು.
ಮತ್ತೊಬ್ಬ ಬಂಧಿತ ವೈದ್ಯ ಮುಜಮ್ಮಿಲ್ ಗನೈ, ಇದೇ ವಿಶ್ವವಿದ್ಯಾಲಯದಲ್ಲಿ ಶಿಕ್ಷಕನಾಗಿದ್ದನು ಎಂದು ತಿಳಿದುಬಂದಿದೆ. ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದ ವೈದ್ಯೆ ಶಾಹೀನ್ ಸಯೀದ್, ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (ಜೆಇಎಂ)ನ ಮಹಿಳಾ ವಿಭಾಗವನ್ನು ಭಾರತದಲ್ಲಿ ಸ್ಥಾಪಿಸಲು ಬಯಸಿದ್ದಳು ಎಂದು ತನಿಖೆಯಿಂದ ಬಯಲಾಗಿದೆ.
ಈ ಘಟನೆಗಳು ದೇಶದಲ್ಲಿ ವೈಟ್ ಕಾಲರ್ ಭಯೋತ್ಪಾದನೆ ಸಕ್ರಿಯವಾಗಿರುವುದನ್ನು ಪತ್ತೆ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.