ADVERTISEMENT

‘ಸೇನೆ, ಸರ್ಕಾರ ಕಂಗೆಡುವಂತೆ ಮಾಡಿ’: ಅಲ್‌ಕೈದಾ ಮುಖ್ಯಸ್ಥ ಜವಾಹಿರಿ ವಿಡಿಯೊ ಸಂದೇಶ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 18:35 IST
Last Updated 10 ಜುಲೈ 2019, 18:35 IST
   

ನವದೆಹಲಿ: ಭಾರತದ ಅರ್ಥ ವ್ಯವಸ್ಥೆಯು ಕುಸಿದು ದೇಶವು ತತ್ತರಿಸುವಂತೆ ಭಾರತೀಯ ಸೇನೆಗೆ ನಿರಂತರ ಹೊಡೆತ ಕೊಡುತ್ತಿರಬೇಕು ಎಂದು ಉಗ್ರಗಾಮಿ ಸಂಘಟನೆ ಅಲ್‌ ಕೈದಾ ಮುಖ್ಯಸ್ಥ ಅಯ್ಮನ್‌ ಅಲ್‌ ಜವಾಹಿರಿ ಹೇಳಿರುವ ವಿಡಿಯೊ ಪ್ರಸಾರವಾಗಿದೆ.

ಬಿನ್‌ ಲಾದೆನ್‌ ಸತ್ತ ನಂತರ ಅಲ್‌ ಕೈದಾದ ನೇತೃತ್ವವನ್ನು ಜವಾಹಿರಿ ವಹಿಸಿಕೊಂಡಿದ್ದಾನೆ. ಭಾರತದ ಮಾನವ ಸಂಪನ್ಮೂಲ ಮತ್ತು ಸೇನಾ ಸಲಕರಣೆಗಳು ನಿರಂತರವಾಗಿ ನಷ್ಟವಾಗುವಂತೆ ನೋಡಿಕೊಳ್ಳಬೇಕು ಎಂದು ಕಾಶ್ಮೀರದಲ್ಲಿನ ಸಶಸ್ತ್ರ ಉಗ್ರರಿಗೆ ಆತ ಕರೆ ಕೊಟ್ಟಿದ್ದಾನೆ.

ಅಲ್‌ ಕೈದಾದ ಸುದ್ದಿ ವಾಹಿನಿ ಅಸ್‌ ಸಹಬ್‌ನಲ್ಲಿ ಈ ವಿಡಿಯೊವನ್ನು ಪ್ರಸಾರ ಮಾಡಲಾಗಿದೆ.ಜಗತ್ತಿನಾದ್ಯಂತ ಇರುವ ಮುಸ್ಲಿಂ ಸಹೋದರರ ಜತೆಗೆ ಬಲವಾದ ಸಂವಹನ ಸ್ಥಾಪಿಸಬೇಕು ಎಂದೂ ಉಗ್ರರಿಗೆ ಜವಾಹಿರಿ ಕರೆ ಕೊಟ್ಟಿದ್ದಾನೆ.

ADVERTISEMENT

ಈ ವಿಡಿಯೊವನ್ನು ಭದ್ರತಾ ಸಂಸ್ಥೆಗಳು ಪರಿಶೀಲನೆ ನಡೆಸಿವೆ. ಕಾಶ್ಮೀರದಲ್ಲಿನ ಅತೃಪ್ತ ಉಗ್ರರನ್ನು ಒಟ್ಟಾಗಿಸುವುದು ಈ ವಿಡಿಯೊದ ಉದ್ದೇಶ ಆಗಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಭಯೋತ್ಪಾದಕ ಜಾಕಿರ್‌ ಮೂಸಾನನ್ನುಭದ್ರತಾ ಪಡೆಗಳು ಕಾಶ್ಮೀರದಲ್ಲಿ ಮೇ ತಿಂಗಳಲ್ಲಿ ಹೊಡೆದುರುಳಿಸಿದ್ದವು. ಜವಾಹಿರಿ ಮಾತನಾಡುವಾಗ ಆತನ ಚಿತ್ರವನ್ನು ಪರದೆಯಲ್ಲಿ ತೋರಿಸಲಾಗಿತ್ತು. ಆದರೆ, ಆತನ ಬಗ್ಗೆ ಮಾತಿನಲ್ಲಿ ಯಾವುದೇ ಉಲ್ಲೇಖ ಇರಲಿಲ್ಲ. ಅನ್ಸಾರ್‌ ಗಜವತ್‌ ಉಲ್‌ ಹಿಂದ್‌ ಎಂಬ ಹೆಸರಿನಲ್ಲಿ ಅಲ್‌ ಕೈದಾದ ಭಾರತೀಯ ಘಟಕವನ್ನು ಮೂಸಾ ಆರಂಭಿಸಿದ್ದ.

ಪಾಕಿಸ್ತಾನ ವಿರುದ್ಧ ಆಕ್ರೋಶ
ಭಯೋತ್ಪಾದಕರು ಪಾಕಿಸ್ತಾನದ ಬಲೆಗೆ ಬೀಳಬಾರದು ಎಂದೂ ಜವಾಹಿರಿ ಹೇಳಿದ್ದಾನೆ. ಪಾಕಿಸ್ತಾನವು ಅಮೆರಿಕದ ಕೈಗೊಂಬೆ ಎಂದು ಆತ ಆಕ್ರೋಶ ವ್ಯಕ್ತಪಡಿಸಿದ್ದಾನೆ.

‘ಪಾಕಿಸ್ತಾನದ ಸರ್ಕಾರ ಮತ್ತು ಸೇನೆಯು ನಿರ್ದಿಷ್ಟ ರಾಜಕೀಯ ಲಾಭಕ್ಕಾಗಿ ಉಗ್ರಗಾಮಿ ಸಂಘಟನೆಗಳನ್ನು ಬಳಸಿಕೊಳ್ಳುತ್ತಿವೆ. ಆದರೆ, ಬಳಿಕ ಈ ಉಗ್ರರಿಗೆ ಕಿರುಕುಳ ನೀಡಲಾಗುತ್ತದೆ. ಪಾಕಿಸ್ತಾನವು ಭಾರತದ ಜತೆಗೆ ಹೊಂದಿರುವು ಸಂಘರ್ಷವು ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಅದು ಗಡಿ ತಕರಾರು ಮಾತ್ರ. ಇದರ ಹಿಂದೆ ಇರುವುದು ಅಮೆರಿಕ’ ಎಂದು ಆತ ಹೇಳಿದ್ದಾನೆ.

ಕಾಶ್ಮೀರಕ್ಕಾಗಿ ನಡೆಯುತ್ತಿರುವ ಹೋರಾಟವು ಪ್ರತ್ಯೇಕವಾದ ಸಂಘರ್ಷ ಅಲ್ಲ. ಅದು ಜಗತ್ತಿನಾದ್ಯಂತ ಮುಸ್ಲಿಂ ಸಮುದಾಯ ನಡೆಸುತ್ತಿರುವ ಸಂಘರ್ಷದ ಭಾಗ. ಈ ವಿಚಾರವನ್ನು ‘ಅನಾಮಧೇಯ’ ವಿದ್ವಾಂಸರು ಎಲ್ಲೆಡೆ ಹರಡುವಂತೆ ಮಾಡಬೇಕು ಎಂದು ಜವಾಹಿರಿ ಹೇಳಿದ್ದಾನೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳಿಗೂ ಆತ ಎಚ್ಚರಿಕೆ ನೀಡಿದ್ದಾನೆ. ಈ ಸಂಸ್ಥೆಗಳು ಅಮೆರಿಕದ ಕೈಯಲ್ಲಿರುವ ಸಾಧನಗಳು ಮಾತ್ರ. ತಮ್ಮ ರಾಜಕೀಯ ಚೌಕಾಸಿಗಾಗಿ ಭಯೋತ್ಪಾದಕ ಸಂಘಟನೆಗಳು ತಮ್ಮ ನಿಯಂತ್ರಣದಲ್ಲಿಯೇ ಇರಬೇಕು ಎಂದು ಈ ಗುಪ್ತಚರ ಸಂಸ್ಥೆಗಳು ಬಯಸುತ್ತಿವೆ ಎಂದೂ ಆತ ಎಚ್ಚರಿಕೆ ನೀಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.