ಪ್ರಾತಿನಿಧಿಕ ಚಿತ್ರ
ಕೃಪೆ: Gemini AI
ಅಹಮದಾಬಾದ್: ‘ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬೆಂಗಳೂರಿನಲ್ಲಿ ಬಂಧಿಸಿದ್ದ ಮಹಿಳೆ ಅಲ್ ಖೈದಾ ಸಿದ್ದಾಂತಗಳನ್ನು ಹರಡುತ್ತಿದ್ದಳು. ‘ಪ್ರಾಜೆಕ್ಟ್ ಖಿಲಾಫತ್’ ಅಡಿ ಮುಸ್ಲಿಂ ರಾಷ್ಟ್ರ ಒಗ್ಗೂಡಿಸಲು ಭಾರತದ ಮೇಲೆ ದಾಳಿ ಮಾಡುವಂತೆ ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಂ ಮುನೀರ್‌ಗೆ ಮನವಿ ಮಾಡಿಕೊಂಡಿದ್ದಳು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಉಪ ಖಂಡದ ನಿಷೇಧಿತ ಅಲ್ ಖೈದಾ(ಎಕ್ಯುಐಎಸ್) ಸಂಘಟನೆಯ ಸಿದ್ದಾಂತವನ್ನು ತನ್ನ ಸಾಮಾಜಿಕ ಮಾಧ್ಯಮ ಪುಟಗಳ ಮೂಲಕ ಹರಡುತ್ತಿರುವ ಆರೋಪದ ಮೇಲೆ ಶಮಾ ಪರ್ವೀನ್ ಅನ್ಸಾರಿ ಎಂಬಾಕೆಯನ್ನು ಜುಲೈ 29ರಂದು ಗುಜರಾತ್ ಎಟಿಎಸ್ ಬೆಂಗಳೂರಿನಲ್ಲಿ ಬಂಧಿಸಿತ್ತು.
‘ಶಮಾ ಎರಡು ಫೇಸ್‌ಬುಕ್ ಪೇಜ್, 10 ಸಾವಿರ ಫಾಲೋವರ್ಸ್‌ಗಳಿರುವ ಇನ್‌ಸ್ಟಾಗ್ರಾಂ ಖಾತೆ ನಿವರ್ಹಿಸುತ್ತಿದ್ದಳು. ಅಲ್ ಖೈದಾ ಮತ್ತು ಇತರೆ ಸಮಾಜಘಾತುಕ ಶಕ್ತಿಗಳ ಜಿಹಾದಿ ಮತ್ತು ಭಾರತ ವಿರೋಧಿ ಮಾಹಿತಿಯನ್ನು ಆಕೆ ಹರಡುತ್ತಿದ್ದಳು’ ಎಂದು ಬುಧವಾರ ಎಟಿಎಸ್ ಹೇಳಿದೆ.
ಮೇ 9ರಂದು ಆಪರೇಷನ್ ಸಿಂಧೂರ ನಡೆಸಿದ ಎರಡು ದಿನಗಳ ನಂತರ ಶಮಾ, ‘ಭಾರತದ ಮೇಲೆ ದಾಳಿ ಮಾಡುವ ಚಿನ್ನದಂತ ಸಮಯವನ್ನು ಬಳಸಿಕೊಳ್ಳಿ. ‘ಮುಸ್ಲಿಂ ನೆಲವನ್ನು ಒಗ್ಗೂಡಿಸಿ, ಖಿಲಾಫತ್ ಪ್ರಾಜೆಕ್ಟ್ ಪೂರ್ಣಗೊಳಿಸಿ, ಹಿಂದುತ್ವ ಮತ್ತು ರಾಷ್ಟ್ರವಾದವನ್ನು ನಾಶ ಮಾಡಿ’ ಎಂದು ಜನರಲ್ ಮುನೀರ್‌ಗೆ ಮನವಿ ಮಾಡುವ ಫೇಸ್‌ಬುಕ್ ಪೋಸ್ಟ್ ಅಪ್‌ಲೋಡ್ ಮಾಡಿದ್ದಳು. ಪೋಸ್ಟ್‌ನಲ್ಲಿ ಮುನೀರ್ ಭಾವಚಿತ್ರ ಇತ್ತು ಎಂದು ಎಟಿಎಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
‘ಆಕೆ ಮೂರು ವಿಡಿಯೊ ಶೇರ್ ಮಾಡಿದ್ದಳು. ಒಂದರಲ್ಲಿ ಭಾರತೀಯ ಸೇನೆಯನ್ನು ಬೆಂಬಲಿಸಿದ್ದ ಮತ್ತು ಪಹಲ್ಗಾಮ್ ದಾಳಿ ಖಂಡಿಸಿದ್ದ ಮುಸ್ಲಿಂ ಮಹಿಳೆಯರನ್ನು ಧಾರ್ಮಿಕ ಬೋಧಕರೊಬ್ಬರು ನಿಂದಿಸುವ ದೃಶ್ಯವಿತ್ತು. ಮತ್ತೊಂದರಲ್ಲಿ ಲಾಹೋರ್‌ನ ಇಮಾಮ್ ಅಬ್ದುಲ್ ಅಜೀಜ್ ಭಾರತದಲ್ಲಿ ಸರ್ಕಾರದ ವಿರುದ್ಧ ಅಸ್ತಿತ್ವದಲ್ಲಿರುವ ಶಸ್ತ್ರ ಸಜ್ಜಿತ ಖಿಲಾಫತ್ ವ್ಯವಸ್ಥೆಯನ್ನು ಪ್ರಚೋದಿಸುವ ಹೇಳಿಕೆ ನೀಡುತ್ತಿರುವ ಅಂಶವಿತ್ತು. ಮೂರನೇ ವಿಡಿಯೊದಲ್ಲಿ ಅಲ್ ಖೈದಾ ಮುಖಂಡ ‘ಘಜ್ವಾ –ಇ– ಹಿಂದ್ ಬಗ್ಗೆ ಹೇಳುವ, ಭಾರತದಲ್ಲಿ ಹಿಂದೂ ಸಮುದಾಯ ಗುರಿಯಾಗಿಸಿ ದಾಳಿ ಮಾಡಿ, ಹಿಂಸೆ ಸೃಷ್ಟಿಸುವಂತೆ ಪ್ರಚೋದಿಸುವ ಅಂಶ ಇತ್ತು’ ಎಂದು ಮಾಹಿತಿ ನೀಡಿದೆ.
ಇನ್‌ಸ್ಟಾಗ್ರಾಂ ಖಾತೆಗಳ ಮೂಲಕ ಭಾರತ ವಿರೋಧಿ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ಆರೋಪದ ಮೇಲೆ ಎಟಿಎಸ್ ಬಂಧಿಸಿದ್ದ ನಾಲ್ವರ ಪೈಕಿ ಇಬ್ಬರ ಜೊತೆ ಶಮಾ ಅನ್ಸಾರಿಗೆ ಸಂಪರ್ಕ ಇತ್ತು ಎಂದೂ ಎಟಿಎಸ್ ಹೇಳಿದೆ. ಯುಎಪಿಎ (ಕಾನೂನು ಬಾಹಿರ ಚಟುವಟಿಕೆ(ನಿರ್ಬಂಧ)ಕಾಯ್ದೆ) ಅಡಿ ಈ ಐವರ ವಿರುದ್ಧ ಪ್ರಕರಣ ದಾಖಲಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.