ADVERTISEMENT

ಗೋವಾ ಮಾಜಿ ಸಿಎಂ ಲುಯಿಜಿನೊ ಫೆಲೆರೊಗೆ ಟಿಎಂಸಿ ಉಪಾಧ್ಯಕ್ಷ ಸ್ಥಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಅಕ್ಟೋಬರ್ 2021, 8:35 IST
Last Updated 22 ಅಕ್ಟೋಬರ್ 2021, 8:35 IST
ಲುಯಿಜಿನೊ ಫೆಲೆರೊ ಮತ್ತು ಮಮತಾ ಬ್ಯಾನರ್ಜಿ
ಲುಯಿಜಿನೊ ಫೆಲೆರೊ ಮತ್ತು ಮಮತಾ ಬ್ಯಾನರ್ಜಿ   

ಬೆಂಗಳೂರು: ಗೋವಾದ ಮಾಜಿ ಮುಖ್ಯಮಂತ್ರಿ ಲುಯಿಜಿನೊ ಫೆಲೆರೊ ಅವರನ್ನು ಅಖಿಲ ಭಾರತೀಯ ತೃಣಮೂಲ ಕಾಂಗ್ರೆಸ್‌ ಪಕ್ಷದ (ಟಿಎಂಸಿ) ರಾಷ್ಟ್ರೀಯ ಉಪಾಧ್ಯಕ್ಷರಾಗಿ ಶುಕ್ರವಾರ ನೇಮಕ ಮಾಡಲಾಗಿದೆ.

ಕಳೆದ ತಿಂಗಳು ಫೆಲೆರೊ ಅವರು ಕಾಂಗ್ರೆಸ್‌ ಪಕ್ಷ ತೊರೆದು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸೇರ್ಪಡೆಯಾಗಿದ್ದರು.ಮುಂದಿನ ವರ್ಷ ಗೋವಾ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಪಕ್ಷದ ಮುಖ್ಯಸ್ಥರಾದ ಮಮತಾ ಬ್ಯಾನರ್ಜಿ ಅವರು ಲುಯಿಜಿನೊ ಫೆಲೆರೊ ಅವರನ್ನು ಅಖಿಲ ಭಾರತೀಯ ತೃಣಮೂಲ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದಾಗಿ ಟಿಎಂಸಿ ಟ್ವೀಟಿಸಿದೆ.

ADVERTISEMENT

ಟಿಎಂಸಿ ಸೇರ್ಪಡೆಯ ಬಳಿಕ ಪ್ರತಿಕ್ರಿಯಿಸಿದ್ದ ಫೆಲೆರೊ, 'ನಾನು ಕಾಂಗ್ರೆಸ್ ಪಕ್ಷದಿಂದ ಹೊರಬಂದಿರಬಹುದು. ಆದರೆ, ಈಗಲೂ ನಾನು ನಾಯಕ ಎಂದು ಹೇಳಲೇಬೇಕು. ನಾನು ಅದೇ ಸಿದ್ಧಾಂತ ಮತ್ತು ತತ್ವಗಳನ್ನು ನಂಬಿದ್ದೇನೆ. ಇಂದು ನಾನು ಟಿಎಂಸಿಗೆ ಸೇರುವಾಗ, ನನ್ನ ಕನಸು ಈ ಕಾಂಗ್ರೆಸ್ ಕುಟುಂಬವನ್ನು ಒಟ್ಟುಗೂಡಿಸುವುದಾಗಿದೆ. ನನ್ನ ಪ್ರಮುಖ ಗುರಿ ಬಿಜೆಪಿಯನ್ನು ಸೋಲಿಸುವುದು' ಎಂದಿದ್ದರು.

2017ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆದ್ದಿತ್ತು. ಆದರೆ, ನಂತರದ ಬೆಳವಣಿಗೆಯಲ್ಲಿ ಹಲವು ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿದರು. 2019ರ ಜುಲೈನಲ್ಲಿ 10 ಶಾಸಕರು ಪಕ್ಷ ತೊರೆದು ಆಡಳಿತಾರೂಢ ಬಿಜೆಪಿ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.