ADVERTISEMENT

ಭಾರತ–ಚೀನಾ ಸಂಘರ್ಷ: ಪ್ರಧಾನಿ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ, ಯಾರು ಏನಂದ್ರು

ಏಜೆನ್ಸೀಸ್
Published 19 ಜೂನ್ 2020, 15:51 IST
Last Updated 19 ಜೂನ್ 2020, 15:51 IST
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಯಿತು
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಯಿತು   

ನವದೆಹಲಿ: ಚೀನಾದೊಂದಿಗಿನ ಗಡಿ ಸಂಘರ್ಷಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆ ಮುಕ್ತಾಯವಾಗಿದೆ. ಸಭೆಯಲ್ಲಿ ಏನೇನು ಚರ್ಚೆಗಳಾಗಿವೆ? ಯಾರು ಏನು ಹೇಳಿದ್ದಾರೆಎಂಬ ಮಾಹಿತಿ ಇಲ್ಲಿದೆ.

* ‘ಪರಿಸ್ಥಿತಿ ನಿಭಾಯಿಸಿದ್ದರ ಬಗ್ಗೆ ಪ್ರಶ್ನಿಸಲು ಇದು ಸುಸಮಯವಲ್ಲ. ಭಾರತ ಪ್ರಧಾನಿಯವರೊಂದಿಗೆ ಇದೆ. ನಾವೆಲ್ಲ ಪ್ರಧಾನಿ ಜತೆ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ಚೀನಾಕ್ಕೆ ರವಾನಿಸೋಣ’ ಎಂದು ಅಕಾಲಿದಳದ ಸುಖ್‌ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.

* ‘ಪಾಕಿಸ್ತಾನ ಮತ್ತು ಚೀನಾ ದೇಶಗಳ ನಿಷ್ಠೆ ಸರಿಯಿಲ್ಲ. ಭಾರತವು ಚೀನಾದ ಡಂಪಿಂಗ್ ಗ್ರೌಂಡ್ ಆಗಬಾರದು. ಚೀನಾ ಸರಕುಗಳ ಮೇಲೆ ಶೇ 300ರಷ್ಟು ತೆರಿಗೆ ವಿಧಿಸಿ’ ಎಂದು ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್ ಸರ್ವಪಕ್ಷ ಸಭೆಯಲ್ಲಿ ಕೇಂದ್ರಕ್ಕೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

*‘ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಇದು ನಮ್ಮ ಭಾವನೆ. ನಾವು ಪ್ರಧಾನಿ ಜತೆಗಿದ್ದೇವೆ. ನಮ್ಮ ಸೇನಾ ಪಡೆಗಳ ಹಾಗೂ ಅವರ ಕುಟುಂಬದವರ ಜತೆ ನಾವಿದ್ದೇವೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

* ‘ಚೀನಾ ವಿರುದ್ಧ ದೇಶದಾದ್ಯಂತ ಜನಾಕ್ರೋಶ ವ್ಯಕ್ತವಾಗಿದೆ. ಈ ವಿಚಾರದಲ್ಲಿ ನಮ್ಮಲ್ಲಿ ಭಿನ್ನಮತವಿಲ್ಲ. ನಾವು ಒಗ್ಗಟ್ಟಾಗಿದ್ದೇವೆ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

*‘ಬೇರೆ ದೇಶಗಳ ವಿಚಾರ ಬಂದಾಗ ಪಕ್ಷಗಳು ಒಡಕು ಪ್ರದರ್ಶಿಸಬಾರದು. ಭಾರತದ ಕುರಿತಾದ ಚೀನಾದ ನಿಲುವು ಗೊತ್ತಿರುವಂಥದ್ದೇ. ಭಾರತವು ಚೀನಾಕ್ಕೆ ಗೌರವ ಕೊಡಬೇಕೆಂದು ಬಯಸುತ್ತದೆ. ಆದರೆ 1962ರಿಂದಲೂ ಚೀನಾ ಮಾಡಿದ್ದೇನು’ ಎಂದು ನಿತೀಶ್ ಪ್ರಶ್ನಿಸಿದ್ದಾರೆ.

*‘ಚೀನಾ ಸರಕುಗಳು ಭಾರತದ ಮಾರುಕಟ್ಟೆಗಳಿಗೆ ಪ್ರವಾಹದೋಪಾದಿಯಲ್ಲಿ ಬರುತ್ತಿರುವುದು ಮುಖ್ಯ ಸಮಸ್ಯೆ. ಅವುಗಳಲ್ಲಿ ಪ್ಲಾಸ್ಟಿಕ್ ವಸ್ತುಗಳೇ ಹೆಚ್ಚು. ಪರಿಸರಸ್ನೇಹಿಯೂ ಅಲ್ಲ. ಚೀನಾ ವಸ್ತುಗಳಿಂದ ಎಲೆಕ್ಟ್ರಾನಿಕ್ ತ್ಯಾಜ್ಯದ ಸಮಸ್ಯೆಯೂ ಉಂಟಾಗುತ್ತಿದೆ. ಚೀನಾ ಉತ್ಪನ್ನಗಳು ದೀರ್ಘಾವಧಿಗೆ ಬಾಳಿಕೆಯೂ ಬರುವುದಿಲ್ಲ. ಕೇಂದ್ರಕ್ಕೆ ಬಂಬಲ ನೀಡುವುದು ನಮ್ಮ ಕರ್ತವ್ಯ’ ಎಂದೂ ನಿತೀಶ್ ಹೇಳಿದ್ದಾರೆ.

* ‘ಚೀನಾ ಪ್ರಜಾಪ್ರಭುತ್ವ ರಾಷ್ಟ್ರವಲ್ಲ. ಅವರದ್ದು ಸರ್ವಾಧಿಕಾರ. ಅವರು ಅಂದುಕೊಂಡದ್ದನ್ನು ಅವರು ಮಾಡಬಲ್ಲರು. ಇನ್ನೊಂದೆಡೆ ನಾವು ಜತೆಯಾಗಿ ಕೆಲಸ ಮಾಡಬೇಕಿದೆ. ಹೀಗೆ ಮಾಡಿದಲ್ಲಿ ಭಾರತವೇ ಗೆಲ್ಲಲಿದೆ, ಚೀನಾಗೆ ಸೋಲಾಗಲಿದೆ. ಒಗ್ಗಟ್ಟಿನಿಂದ ಮಾತನಾಡೋಣ,ಒಗ್ಗಟ್ಟಾಗಿ ಯೋಚಿಸೋಣ, ಒಗ್ಗೂಡಿ ಕೆಲಸ ಮಾಡೋಣ. ನಾವು ದೃಢವಾಗಿ ಸರ್ಕಾರದ ಜತೆ ನಿಲ್ಲುತ್ತೇವೆ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

* ‘ಸರ್ವಪಕ್ಷ ಸಭೆ ಕರೆದಿರುವುದು ದೇಶಕ್ಕೆ ಉತ್ತಮ ಸಂದೇಶ ನೀಡಿದಂತೆ. ನಮ್ಮ ಯೋಧರ ಬೆನ್ನಿಗೆ ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ ಎಂಬುದನ್ನು ತೋರಿಸುತ್ತದೆ. ಟಿಎಂಸಿಯು ಸರ್ಕಾರದ ಜತೆ ನಿಲ್ಲುತ್ತದೆ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

* ‘ದೂರಸಂಪರ್ಕ, ರೈಲ್ವೆ, ವಿಮಾನಯಾನ ಕ್ಷೇತ್ರಕ್ಕೆ ಚೀನಾ ಕಾಲಿಡದಂತೆ ಮಾಡಬೇಕಿದೆ. ಹೀಗೆ ಮಾಡುವುದರಿಂದ ನಾವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಆದರೂ ಈ ಕ್ಷೇತ್ರಗಳಲ್ಲಿ ಕಾಲಿಡಲು ಚೀನಾಕ್ಕೆ ಅವಕಾಶ ನೀಡಬಾರದು’ ಎಂದೂ ಮಮತಾ ಹೇಳಿದ್ದಾರೆ.

* ಚೀನಾ ವಿಚಾರದಲ್ಲಿ ಸರ್ಕಾರಕ್ಕೆ ಬೇಷರತ್ತು ಬೆಂಬಲ ನೀಡಲಿದ್ದೇವೆ ಎಂದು ಬಿಜೆಡಿಯ ಪಿನಾಕಿ ಮಿಶ್ರಾ ಹೇಳಿದ್ದಾರೆ.

* ‘ಭಾರತದ ವರ್ಚಸ್ಸನ್ನು ಜಾಗತಿ ಮಟ್ಟದಲ್ಲಿ ಹೆಚ್ಚಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು. ಪ್ರಧಾನಿಯವರೇ, ನೀವು ನಮ್ಮ ಶಕ್ತಿ. ಭಾರತದ ಬಗ್ಗೆ ಅನೇಕರಿಗೆ ಅಸೂಯೆಗಳಿವೆ. ಅವರು (ಚೀನಾ) ಭಾರತವನ್ನು ಅಸ್ಥಿರಗೊಳಿಸಲು ಹವಣಿಸುತ್ತಿದ್ದಾರೆ’ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.