ADVERTISEMENT

ವಿಶ್ವದ ಅತಿ ದೀರ್ಘ ವಾಯುಮಾರ್ಗ ಕ್ರಮಿಸಿ ಇತಿಹಾಸ ಬರೆದ ಭಾರತೀಯ ಮಹಿಳಾ ಪೈಲಟ್‌ಗಳು

ಏಜೆನ್ಸೀಸ್
Published 11 ಜನವರಿ 2021, 4:25 IST
Last Updated 11 ಜನವರಿ 2021, 4:25 IST
ಯಶಸ್ವಿ ವಿಮಾನ ನಡೆಸಿ ಬೆಂಗಳೂರಿಗೆ ಬಂದಿಳಿದ ಮಹಿಳಾ ಪೈಲಟ್‌ಗಳ ತಂಡ
ಯಶಸ್ವಿ ವಿಮಾನ ನಡೆಸಿ ಬೆಂಗಳೂರಿಗೆ ಬಂದಿಳಿದ ಮಹಿಳಾ ಪೈಲಟ್‌ಗಳ ತಂಡ    

ಬೆಂಗಳೂರು: ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯ ನಾಲ್ವರು ಮಹಿಳಾ ಪೈಲಟ್‌ಳು, ಸ್ಯಾನ್‌ ಫ್ರಾನ್ಸಿಸ್ಕೊ- ಬೆಂಗಳೂರು ನಡುವಣ ವಿಶ್ವದ ಅತೀ ದೀರ್ಘ ವಾಯು ಮಾರ್ಗದ ವಿಮಾನಯಾನವನ್ನು ಸಂಪೂರ್ಣವಾಗಿ ನಿರ್ವಹಿದ್ದಾರೆ. ಆ ಮೂಲಕ ಸೋಮವಾರ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಕ್ಯಾಪ್ಟನ್ ಜೋಯಾ ಅಗರ್‌ವಾಲ್‌, ಕ್ಯಾಪ್ಟನ್ ಪಾಪಗರಿ ತನ್ಮೈ, ಕ್ಯಾಪ್ಟನ್ ಆಕಾಶಾ ಸೋನಾವೇರ್ ಮತ್ತು ಕ್ಯಾಪ್ಟನ್ ಶಿವಾನಿ ಮನ್ಹಾಸ್ ಅವರನ್ನೊಳಗೊಂಡ ತಂಡವು ಈ ಉದ್ಘಾಟನಾ ವಿಮಾನ ಸಂಚಾರದ ಸಾರಥ್ಯವಹಿಸಿತ್ತು

ಮಹಿಳಾ ಪೈಲಟ್‌ಗಳ ನಿರ್ವಹಣೆಯ ವಿಮಾನವು ಉತ್ತರ ಧ್ರುವದ ಮೇಲೆ ಹಾರಿ, ಅಟ್ಲಾಂಟಿಕ್ ಮಾರ್ಗದ ಮೂಲಕ, 16,000 ಕಿ.ಮೀ ದೂರವನ್ನು ಕ್ರಮಿಸಿ ಬೆಂಗಳೂರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

ADVERTISEMENT

ಸ್ಯಾನ್‌ ಫ್ರಾನ್ಸಿಸ್ಕೊ – ಬೆಂಗಳೂರು ನಡುವಿನ ಮಾರ್ಗವು ವಿಶ್ವದ ಅತ್ಯಂತ ದೀರ್ಘ ವಾಯು ಮಾರ್ಗವಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಿಮಾನಗಳು ಭೂಮಿಯ ಮೇಲಿನ ದುರ್ಗಮ ಪ್ರದೇಶ ಎನ್ನುವ ಉತ್ತರ ಧ್ರುವವನ್ನು ದಾಟಿ ಬರುತ್ತವೆ.

ಶನಿವಾರ ರಾತ್ರಿ 8.30ಕ್ಕೆ (ಸ್ಥಳೀಯ ಸಮಯ) ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೊದಿಂದ ಹೊರಟ ಎಐ 176 ವಿಮಾನ, , ಸೋಮವಾರ (ಸ್ಥಳೀಯ ಸಮಯ) ಮುಂಜಾನೆ 4ಗಂಟೆ ಸುಮಾರಿನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು.

ಪೈಲಟ್‌ಗಳ ಸಂತಸ

ಸಾಧನೆ ಭಾಗವಾಗಿದ್ದಕ್ಕೆ ಹೆಮ್ಮೆ ಇದೆ

ಉತ್ತರ ಧ್ರುವವನ್ನು ಹಾದು ಬರುವುದು ಮಾತ್ರವಲ್ಲ, ಅದನ್ನು ಮಹಿಳಾ ಪೈಲಟ್‌ಗಳೇ ಯಶಸ್ವಿಯಾಗಿ ನಿಭಾಯಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿ ಮಾಡಿದ್ದೇವೆ. ಈ ಸಾಧನೆಯ ಭಾಗವಾಗಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ. ಹೆಮ್ಮೆ ಎನಿಸಿದೆ. ಈ ಮಾರ್ಗವು 10 ಟನ್ ಇಂಧನವನ್ನು ಉಳಿಸಿದೆ ಎಂದು ಕ್ಯಾಪ್ಟನ್ ಜೊಯಾ ಅಗರ್ವಾಲ್ ಹೇಳಿದ್ದಾರೆ.

ರೋಮಾಂಚನಕಾರಿ ಅನುಭವ

'ಇದು ಹಿಂದೆಂದೂ ನಡೆಯದೇ ಇದ್ದ ವಿದ್ಯಮಾನ. ಈ ಸಾಹಸ ರೋಮಾಂಚಕಾರಿ ಅನುಭವ ನೀಡಿತು. ಸ್ಯಾನ್‌ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ಬರಲು ಸುಮಾರು 17 ಗಂಟೆಗಳು ಬೇಕಾಯಿತು,' ಎಂದು ಏರ್ ಇಂಡಿಯಾದ ಉದ್ಘಾಟನಾ ಹಾರಾಟದ ತಂಡದಲ್ಲಿದ್ದ ನಾಲ್ಕು ಪೈಲಟ್‌ಗಳಲ್ಲಿ ಒಬ್ಬರಾದ ಶಿವಾನಿ ಮನ್ಹಾಸ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.