ಪ್ರಯಾಗ್‌ರಾಜ್: ಸಾಮಾಜಿಕ ಮಾಧ್ಯಮದಲ್ಲಿ ಪಾಕಿಸ್ತಾನ ಹೊಗಳಿದ್ದ ಆರೋಪ ಹೊತ್ತಿರುವ ಆರೋಪಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಮೀರತ್ ಮೂಲದ ಸಾಜಿದ್ ಚೌಧರಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS) ಅಡಿಯಲ್ಲಿ ಕಳೆದ 13ರಂದು ಪ್ರಕರಣ ದಾಖಲಾಗಿತ್ತು. ಬಂಧನವೂ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್‌ನಲ್ಲಿ ‘ಕಮ್ರಾನ್ ಭಟ್ಟಿ ನಿಮ್ಮ ಬಗ್ಗೆ ಹೆಮ್ಮೆ ಇದೆ. ಪಾಕಿಸ್ತಾನ ಜಿಂದಾಬಾದ್’ ಎಂದ ಆರೋಪ ಇವರ ಮೇಲಿದೆ.
‘ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ (BNS 152) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಇಂಥ ಪೋಸ್ಟ್ ಹಂಚಿಕೊಳ್ಳುವುದರಿಂದ ಜನರನ್ನು ರೊಚ್ಚಿಗೆಬ್ಬಿಸುವ ಅಥವಾ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದಾಗಿದೆ (BNS 196). ಹೀಗಾಗಿ ಮಾಡಿರುವ ಆರೋಪಕ್ಕೂ, ದಾಖಲಿಸಿರುವ ಪ್ರಕರಣಕ್ಕೂ ವ್ಯತ್ಯಾಸವಿದೆ’ ಎಂದು ಅಭಿಪ್ರಾಯಪಟ್ಟ ನ್ಯಾ. ಸಂತೋಷ್ ರಾಯ್ ಅವರಿದ್ದ ನ್ಯಾಯಪೀಠ ಜಾಮೀನು ಮಂಜೂರು ಮಾಡಿದೆ.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ‘ದುರುದ್ದೇಶದಿಂದ ಕಕ್ಷೀದಾರರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಅವರು ತಮಗೆ ಲಭ್ಯವಾದ ಪೋಸ್ಟ್ ಅನ್ನು ‘ಫಾರ್ವರ್ಡ್’ ಮಾಡಿದ್ದಾರೆಯೇ ಹೊರತು, ಅದನ್ನು ಇತರರಿಗೆ ಹಂಚಿಲ್ಲ ಮತ್ತು ವಿಡಿಯೊ ಮಾಡಿ ಹರಿಯಬಿಟ್ಟಿಲ್ಲ’ ಎಂದಿದ್ದಾರೆ.
‘ಕಕ್ಷಿದಾರರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ಈ ಹಿಂದೆ ದಾಖಲಾಗಿಲ್ಲ. ಜಾಮೀನು ಮೇಲೆ ಬಿಡುಗಡೆಯಾದರೆ ಸಾಕ್ಷ್ಯ ನಾಶ ಮಾಡುವ ಪ್ರವೃತ್ತಿಯವೂ ಅಲ್ಲ’ ಎಂದು ಪೀಠದ ಗಮನ ಸೆಳೆದರು.
ಸರ್ಕಾರದ ಪರ ವಕೀಲರು ಇದನ್ನು ವಿರೋಧಿಸಿದರು. ಆರೋಪ ಹೊತ್ತಿರುವ ವ್ಯಕ್ತಿ ಪ್ರತ್ಯೇಕತಾವಾದಿ ಮತ್ತು ಈ ಹಿಂದೆಯೂ ಇಂಥದ್ದೇ ಪ್ರಕರಣಗಳಲ್ಲಿ ಭಾಗಿಯಾದ ಉದಹಾರಣೆಗಳಿವೆ ಎಂದರು. ಆದರೆ ಭಾರತದ ಸಾರ್ವಭೌಮತ್ವಕ್ಕೆ ಯಾವುದೇ ಧಕ್ಕೆಯನ್ನುಂಟು ಮಾಡಿದ ಆರೋಪಕ್ಕೆ ಸಾಕ್ಷ್ಯವನ್ನು ಅವರು ಒದಗಿಸಲಿಲ್ಲ.
‘ಬಿಎನ್‌ಎಸ್‌ನ ಸೆಕ್ಷನ್ 152 ಹೊಸದಾಗಿ ಪರಿಚಯಿಸಲಾಗಿದೆ. ಆದರೆ ಭಾರತೀಯ ದಂಡ ಸಂಹಿತೆಗೆ (IPC) ಸರಿಸಮಾನವಾದ ಅವಕಾಶವನ್ನು ಕಲ್ಪಿಸಿಲ್ಲ. ಹೀಗಾಗಿ ಹೆಚ್ಚು ಜಾಗರೂಕತೆಯಿಂದ ಅದನ್ನು ಬಳಸಬೇಕಿದೆ’ ಎಂದು ಪೀಠ ಅಭಿಪ್ರಾಯಪಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.