ಸಮಯ್ ರೈನಾ
–ಇನ್‌ಸ್ಟಾಗ್ರಾಮ್ ಚಿತ್ರ
ಮುಂಬೈ: ವೆಬ್ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ಯುಟ್ಯೂಬರ್ ರಣವೀರ್ ಇಲಾಹಾಬಾದಿಯಾ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ಮುಂದಿನ ಐದು ದಿನದೊಳಗೆ ವಿಚಾರಣೆಗೆ ಹಾಜರಾಗಬೇಕು ಎಂದು ಹಾಸ್ಯ ಕಲಾವಿದ ಸಮಯ್ ರೈನಾಗೆ ಮಹಾರಾಷ್ಟ್ರ ಸೈಬರ್ ಇಲಾಖೆ ಹಾಗೂ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ರೈನಾ ಅಮೆರಿಕದಲ್ಲಿದ್ದು, ವಿಚಾರಣೆಗೆ ಹಾಜರಾಗಲು ಸಮಯವಕಾಶ ಕೋರಿದ್ದಾರೆ ಎಂದು ಅವರು ಹೇಳಿದ್ದಾರೆ.
‘India's Got Latent’ ಕಾರ್ಯಕ್ರಮದಲ್ಲಿ ಇಲಾಹಾಬಾದಿಯಾ ನೀಡಿದ ಹೇಳಿಕೆ ಸಂಬಂಧ ಸೈಬರ್ ಸೆಲ್ ಹಾಗೂ ಮುಂಬೈ ಪೊಲೀಸರು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ.
ಫೆ. 17ರೊಳಗೆ ವಿಚಾರಣೆಗೆ ಹಾಜರಾಗಬೇಕು ಎಂದು ಮುಂಬೈ ಪೊಲೀಸರು ತಿಳಿಸಿದ್ದರೆ, ಫೆ. 18ರೊಳಗಾಗಿ ವಿಚಾರಣೆ ಎದುರಿಸಬೇಕು ಎಂದು ಸೈಬರ್ ಸೆಲ್ ಸಮನ್ಸ್ ನೀಡಿದೆ.
ಅಲ್ಲಾಬಾಡಿಯಾ ಅವರ ರಿಯಾಲಿಟಿ ಶೋ ಕುರಿತಾದ ಕಾಮೆಂಟ್‌ಗಳಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಲ್ಲಿಯವರೆಗೆ ಸಾಮಾಜಿಕ ಮಾಧ್ಯಮ ಇನ್‌ಫುಲೆನ್ಸರ್ ಅಪೂರ್ವ ಮಖಿಜಾ ಸೇರಿದಂತೆ ಏಳು ಜನರ ಹೇಳಿಕೆಗಳನ್ನು ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಮಹಾರಾಷ್ಟ್ರ ಸೈಬರ್ ಇಲಾಖೆಯು ಇಲಾಹಾಬಾದಿಯಾ ಮತ್ತು ರೈನಾ ಸೇರಿದಂತೆ 40 ಕ್ಕೂ ಹೆಚ್ಚು ಜನರಿಗೆ ಸಮನ್ಸ್ ಜಾರಿ ಮಾಡಿದೆ.
ಏತನ್ಮಧ್ಯೆ, ಇಲಾಹಾಬಾದಿಯಾ ಮತ್ತು ಇತರ ಕೆಲವರ ವಿರುದ್ಧ ದಾಖಲಿಸಿರುವ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮುಂಬೈನಲ್ಲಿರುವ ಅಸ್ಸಾಂ ಪೊಲೀಸರ ತಂಡ ಗುರುವಾರ ಮಹಾರಾಷ್ಟ್ರ ಸೈಬರ್ ಸೆಲ್ ಅಧಿಕಾರಿಗಳನ್ನು ಭೇಟಿ ಮಾಡಿದೆ.
ಇದಕ್ಕೂ ಮುನ್ನ, ತಂಡವು ಖಾರ್ ಪೊಲೀಸ್ ಠಾಣೆಗೆ ಬುಧವಾರ ತೆರಳಿ ಹಿರಿಯ ಪೊಲೀಸ್ ಸಿಬ್ಬಂದಿಯನ್ನು ಭೇಟಿ ಮಾಡಿದೆ. ಗುವಾಹಟಿ ಪೊಲೀಸರು ಇಲಾಹಾಬಾದಿಯಾ ಮತ್ತು ಇತರ ನಾಲ್ವರ ವಿರುದ್ಧ ಸೋಮವಾರ ಪ್ರಕರಣ ದಾಖಲಿಸಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ರೈನಾ ತೀರ್ಪುಗಾರರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.