ನವದೆಹಲಿ: ಆಮ್ ಆದ್ಮಿ ಪಕ್ಷ (ಎಎಪಿ) ಹಾಗೂ ಬಿಜೆಪಿ, ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ವಾಯುಮಾಲಿನ್ಯ, ಕಾನೂನು ಸುವ್ಯವಸ್ಥೆ ಸೇರಿದಂತೆ ಪ್ರಮುಖ ವಿಚಾರಗಳನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಆರೋಪಿಸಿ 12 ಅಂಶಗಳನ್ನೊಳಗೊಂಡ ಶ್ವೇತಪತ್ರವನ್ನು ದೆಹಲಿ ಕಾಂಗ್ರೆಸ್ ಬುಧವಾರ ಬಿಡುಗಡೆ ಮಾಡಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಎಐಸಿಸಿ ಖಜಾಂಚಿ ಅಜಯ್ ಮಾಕೆನ್, ಎಎಪಿ ಸಂಚಾಲಕ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಜನಲೋಕಪಾಲ್' ಹೋರಾಟದ ನೆರವಿನೊಂದಿಗೆ ಅಧಿಕಾರಕ್ಕೆ ಬಂದ ಅವರ ಪಕ್ಷವು, ಜನಲೋಕಪಾಲ್ ರಚಿಸಲು ವಿಫಲವಾಗಿದೆ ಎಂದು ದೂರಿದ್ದಾರೆ.
'ಕೇಜ್ರಿವಾಲ್ ಅವರನ್ನು ಒಂದೇ ಪದದಲ್ಲಿ ಫರ್ಜಿವಾಲ್ (ನಕಲಿವಾಲ್) ಎಂದು ವಿವರಿಸಬಹುದು' ಎಂದು ಕುಟುಕಿದ್ದಾರೆ.
'ಇಡೀ ದೇಶದಲ್ಲಿ ಮಹಾನ್ ವಂಚಕ ಯಾರಾದರೂ ಇದ್ದರೆ, ಅದು ಕೇಜ್ರಿವಾಲ್. ಆ ಕಾರಣಕ್ಕಾಗಿಯೇ ನಾವು, ಕೇಜ್ರಿವಾಲ್ ಸರ್ಕಾರ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಕುರಿತ ಶ್ವೇತಪತ್ರ ಬಿಡುಗಡೆ ಮಾಡಿದ್ದೇವೆ' ಎಂದು ಹೇಳಿದ್ದಾರೆ.
ಎಎಪಿ ಅಧಿಕಾರದಲ್ಲಿರುವ ಪಂಜಾಬ್‌ನಲ್ಲೂ ಜನಲೋಕಪಾಲ್ ಜಾರಿಗೊಳಿಸಿಲ್ಲವೇಕೆ? ಎಂದು ಮಾಕೆನ್ ಪ್ರಶ್ನಿಸಿದ್ದಾರೆ.
'ಕೇಂದ್ರಾಡಳಿತ ಪ್ರದೇಶದಲ್ಲಿ ನಿಮಗೆ ಅವಕಾಶ ನೀಡುತ್ತಿಲ್ಲ ಎಂಬುದಾದರೆ, ಪಂಜಾಬ್‌ನಲ್ಲಿ ಜಾರಿಗೊಳಿಸಿ. ನಿಮ್ಮನ್ನು ಯಾರು ತಡೆಯುತ್ತಿದ್ದಾರೆ? ಅಲ್ಲಿ ನೀವು ಪೂರ್ಣ ಬಹುಮತದ ಸರ್ಕಾರವನ್ನು ಹೊಂದಿದ್ದೀರಿ. ಮತ್ತೇಕೆ ಜನಲೋಕಪಾಲ್ ರಚಿಸುತ್ತಿಲ್ಲ. 10 ವರ್ಷಗಳ ಹಿಂದೆ ಜನಲೋಕಪಾಲ್ ಹೆಸರಿನಲ್ಲಿ ಅಧಿಕಾರಕ್ಕೇರಿದ ಪಕ್ಷ, ಇದೀಗ ಅದನ್ನು ಮರೆತಿದೆ' ಎಂದು ದೂರಿದ್ದಾರೆ.
ಮುಂದುವರಿದು, 'ದೆಹಲಿಯನ್ನು ಲಂಡನ್ ರೀತಿ ಮಾಡುತ್ತೇವೆ ಎಂದು ಹೇಳಿದ್ದ ಎಎಪಿ, ರಾಷ್ಟ್ರ ರಾಜಧಾನಿಯನ್ನು ವಾಯುಮಾಲಿನ್ಯದಲ್ಲಿ ನಂ.1 ಮಾಡಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಶ್ವೇತಪತ್ರಕ್ಕೆ ಸಂಬಂಧಿಸಿದಂತೆ ಎಎಪಿ ಹಾಗೂ ಬಿಜೆಪಿ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಎಐಸಿಸಿ ದೆಹಲಿ ಉಸ್ತುವಾರಿ ಕಾಜಿ ಮೊಹಮ್ಮದ್ ನಿಜಾಮುದ್ದೀನ್, ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದರ್ ಯಾದವ್, ಸಹ ಉಸ್ತುವಾರಿ ಡ್ಯಾನಿಷ್ ಅಬ್ರಾರ್ ಮತ್ತು ಸುಖ್ವಿಂದರ್ ಸಿಂಗ್ ಅವರೂ ಮಾಕೇನ್ ಅವರೊಂದಿಗೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.