ADVERTISEMENT

4 ವಾರಗಳ ಬಳಿಕ ಕೋವಿಶೀಲ್ಡ್ 2ನೇ ಡೋಸ್‌ ನೀಡಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್

ಪಿಟಿಐ
Published 6 ಸೆಪ್ಟೆಂಬರ್ 2021, 12:58 IST
Last Updated 6 ಸೆಪ್ಟೆಂಬರ್ 2021, 12:58 IST
ಸಾಂದರ್ಭಿಕ ಚಿತ್ರ (ಪಿಟಿಐ)
ಸಾಂದರ್ಭಿಕ ಚಿತ್ರ (ಪಿಟಿಐ)   

ಕೊಚ್ಚಿ: ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್‌ ಅನ್ನು ನಾಲ್ಕು ವಾರಗಳ ಬಳಿಕ ಪಡೆಯಲು ಅನುಕೂಲವಾಗುವಂತೆ ‘ಕೋವಿನ್’ ಪೋರ್ಟಲ್‌ನಲ್ಲಿ ಬದಲಾವಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.

ಸದ್ಯ ಮೊದಲ ಡೋಸ್‌ ಪಡೆದ 84 ದಿನಗಳ ಬಳಿಕ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್‌ ಪಡೆಯಬಹುದಾಗಿದೆ. ಆದರೆ, ನಾಲ್ಕು ವಾರಗಳು ಕಳೆದ ಕೂಡಲೇ ಎರಡನೇ ಡೋಸ್ ಪಡೆಯಲು ಬಯಸುವವರಿಗೆ ಲಸಿಕೆ ಒದಗಿಸಬೇಕು ಎಂದು ಹೈಕೋರ್ಟ್ ಹೇಳಿದೆ.

ವಿದೇಶಗಳಿಗೆ ತೆರಳುವವರಿಗೆ ಕೋವಿಡ್‌ನಿಂದ ರಕ್ಷಣೆ ಪಡೆಯುವ ಸಲುವಾಗಿ ಬೇಗನೆ ಲಸಿಕೆ ಪಡೆಯಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನುಮತಿ ನೀಡುವುದಾದರೆ ಅದೇ ಸೌಲಭ್ಯವನ್ನು ಉದ್ಯೋಗ ಅಥವಾ ಶಿಕ್ಷಣದ ಉದ್ದೇಶ ಹೊಂದಿದವರಿಗೆ ಯಾಕೆ ನೀಡಬಾರದು ಎಂದು ನ್ಯಾಯಮೂರ್ತಿ ಪಿ.ಬಿ.ಸುರೇಶ್ ಕುಮಾರ್ ಅವರು ಪ್ರಶ್ನಿಸಿದ್ದಾರೆ.

ಮುಂಚಿತವಾಗಿ ಲಸಿಕೆ ಪಡೆಯುವ ಆಯ್ಕೆಯನ್ನು ಜನರು ಹೊಂದಿದ್ದು, ಇದರ ಅನುಷ್ಠಾನಕ್ಕಾಗಿ ಖಾಸಗಿ ಆಸ್ಪತ್ರೆಗಳ ಮೂಲಕ ಪಾವತಿ ಆಧಾರದಲ್ಲಿಯೂ ಲಸಿಕೆಗಳನ್ನು ವಿತರಿಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಲಸಿಕೆ ನೀತಿಯಲ್ಲಿ ಹೇಳಲಾಗಿದೆ ಎಂಬುದನ್ನೂ ಹೈಕೋರ್ಟ್‌ ಉಲ್ಲೇಖಿಸಿದೆ. ಸೆಪ್ಟೆಂಬರ್ 3ರಂದು ಹೈಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದ್ದು, ಇದರ ಪ್ರತಿ ಸೋಮವಾರ ಮಾಧ್ಯಮಗಳಿಗೆ ದೊರೆತಿದೆ.

84 ದಿನಗಳ ವರೆಗೆ ಕಾಯುವ ಬದಲು ನಾಲ್ಕು ವಾರ ಕಳೆದ ಕೂಡಲೇ ಉದ್ಯೋಗಿಗಳಿಗೆ ಕೋವಿಶೀಲ್ಡ್ ಎರಡನೇ ಲಸಿಕೆಯ ಡೋಸ್ ನೀಡಲು ಅನುಮತಿ ನೀಡಬೇಕೆಂದು ‘ಕಿಟೆಕ್ಸ್ ಗಾರ್ಮೆಂಟ್ಸ್ ಲಿಮಿಟೆಡ್’ ಕಂಪನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಸುಮಾರು 5,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕೋವಿಶೀಲ್ಡ್ ಮೊದಲ ಡೋಸ್‌ ನೀಡಲಾಗಿದೆ. ಸುಮಾರ ₹93 ಲಕ್ಷ ವೆಚ್ಚದಲ್ಲಿ ಎರಡನೇ ಡೋಸ್ ನೀಡಲು ಉದ್ದೇಶಿಸಿದ್ದು, ಸರ್ಕಾರದ ನಿರ್ಬಂಧಗಳಿಂದಾಗಿ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಕಂಪನಿಯು ಅರ್ಜಿಯಲ್ಲಿ ಉಲ್ಲೇಖಿಸಿತ್ತು.

ಆದರೆ ಕೇಂದ್ರ ಸರ್ಕಾರವು ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ತಜ್ಞರ ಶಿಫಾರಸಿನ ಮೇರೆಗೆ ಲಸಿಕೆಯ ಪರಿಣಾಮಕಾರಿತ್ವವನ್ನು ಗಮನದಲ್ಲಿಟ್ಟುಕೊಂಡು 84 ದಿನಗಳ ಅಂತರ ನಿಗದಿಪಡಿಸಲಾಗಿದೆ ಎಂದು ಕೇಂದ್ರವು ವಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.