ಹೈದರಾಬಾದ್: ’ಪೊಲೀಸರು ಅನುಮತಿ ನಿರಾಕರಿಸಿದ್ದರೂ ನಟ ಅಲ್ಲು ಅರ್ಜುನ್ ಅವರು ಡಿ.4ರಂದು ಪುಷ್ಪ–2 ಸಿನಿಮಾವನ್ನು ವೀಕ್ಷಿಸಲು ಇಲ್ಲಿನ ಚಿತ್ರಮಂದಿರಕ್ಕೆ ಬಂದಿದ್ದರು‘ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ವಿಧಾನಸಭೆಯಲ್ಲಿ ಶನಿವಾರ ತಿಳಿಸಿದರು.
’ಅಭಿಮಾನಿಗಳ ನೂಕುನುಗ್ಗಲಿನಿಂದ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ನಂತರವೂ ಥಿಯೇಟರ್‌ನಿಂದ ಅವರು ಹೊರಹೋಗಲಿಲ್ಲ. ಸಿನಿಮಾ ವೀಕ್ಷಿಸುವುದನ್ನು ಮುಂದುವರಿಸಿದ್ದರು. ಪೊಲೀಸರು ಠಾಣೆಗೆ ಕರೆದೊಯ್ಯುವುದಾಗಿ ಎಚ್ಚರಿಕೆ ನೀಡಿದ ಬಳಿಕವಷ್ಟೇ ಅಲ್ಲಿಂದ ಹೊರಟರು‘ ಎಂದು ಹೇಳಿದರು.
ಎಐಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಈ ವಿಷಯವನ್ನು ಪ್ರಸ್ತಾಪಿಸಿದಕ್ಕೆ ಪ್ರತಿಕ್ರಿಯಿಸಿದ ಅವರು, ’ಅಲ್ಲು ಅರ್ಜುನ್ ರೋಡ್ ಷೋ ನಡೆಸಿದ್ದರಿಂದಲೇ ಜನದಟ್ಟಣೆ ಉಂಟಾಗಿದೆ. ವಿಡಿಯೊಗಳಲ್ಲಿ ಚಿತ್ರನಟನ ಲೋಪವು ದಾಖಲಾಗಿದೆ‘ ಎಂದರು.
‘ಚಲನಚಿತ್ರೋದ್ಯಮದ ಉತ್ತೇಜನಕ್ಕಾಗಿ ಸರ್ಕಾರವು ವಿಶೇಷ ಪ್ರದರ್ಶನಗಳಿಗೆ ಅನುಮತಿ ನೀಡುತ್ತದೆ. ಆದರೆ ಜನರು ಜೀವ ಕಳೆದುಕೊಂಡರೆ, ಅದನ್ನು ನಿರ್ಲಕ್ಷಿಸಬೇಕೆ? ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ನಾವು ಅನುಸರಿಸುತ್ತೇವೆ. ಅಧಿಕಾರದಲ್ಲಿರುವವರೆಗೂ ಇಂತಹ ಘಟನೆಗಳನ್ನು ನಿರ್ಲಕ್ಷಿಸಲ್ಲ. ಕಾಲ್ತುಳಿತದಿಂದ ಸಾವಿನಂತಹ ಅಹಿತಕರ ಘಟನೆಗಳು ಸಂಭವಿಸಿದಾಗ ಯಾವುದೇ ವಿಶೇಷ ಸವಲತ್ತುಗಳು ಇರುವುದಿಲ್ಲ’ ಎಂದು ಹೇಳಿದರು.
’ನಟನ ಬಂಧನದ ನಂತರ ಅವರ ಭೇಟಿಗಾಗಿ ಚಿತ್ರರಂಗದ ಗಣ್ಯರು ಸರದಿಯಲ್ಲಿ ಹೋಗುತ್ತಿದ್ದಾರೆ. ಆದರೆ ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆಯ ಪುತ್ರ ಗಾಯಗೊಂಡು ಆಸ್ಪತ್ರೆಯಲ್ಲಿದ್ದರೂ, ಆತನ ಭೇಟಿಗೆ ಸಹಾನುಭೂತಿ ತೋರುತ್ತಿಲ್ಲ‘ ಎಂದು ಟೀಕಿಸಿರುವ ಮುಖ್ಯಮಂತ್ರಿ, ‘ಅಮಾನವೀಯರಾಗಬೇಡಿ ಎಂದು ನಾನು ಅವರಲ್ಲಿ ಮನವಿ ಮಾಡಿಕೊಳ್ಳುವೆ’ ಎಂದಿದ್ದಾರೆ.
ಸಿನಿಮಾ ಪ್ರೋತ್ಸಾಹಿಸಲು ಚಿತ್ರನಟ ಸೇರಿದಂತೆ ಇತರರು ಡಿ. 4ರಂದು ಭೇಟಿ ನೀಡಲಿದ್ದಾರೆ. ಹೀಗಾಗಿ, ಭದ್ರತೆ ಒದಗಿಸಬೇಕು ಎಂದು ಕೋರಿ ಥಿಯೇಟರ್‌ನವರು ಡಿ. 2ರಂದು ಪೊಲೀಸರಿಗೆ ಮನವಿ ಪತ್ರ ನೀಡಿದ್ದರು. ಜನಸಂದಣಿ ನಿಯಂತ್ರಿಸಲು ಎದುರಾಗುವ ಸಮಸ್ಯೆಗಳನ್ನು ಉಲ್ಲೇಖಿಸಿ ಪೊಲೀಸರು ಈ ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಆದರೂ ಥಿಯೇಟರ್‌ಗೆ ಭೇಟಿ ನೀಡಿದ್ದ ಅಲ್ಲು, ಚಿತ್ರಮಂದಿರ ಪ್ರವೇಶಿಸುವ ಮುನ್ನ ಹಾಗೂ ನಿರ್ಗಮಿಸುವ ಮೊದಲು ತನ್ನ ಕಾರಿನ ಮೇಲ್ಚಾವಣಿಯಲ್ಲಿ ನಿಂತು ಜನಸಂದಣಿಯನ್ನು ತನ್ನತ್ತ ಆಕರ್ಷಿಸಲು ಮುಂದಾಗಿದ್ದಾರೆ. ಆ ಸಂದರ್ಭ ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರಿಂದ ಕಾಲ್ತುಳಿತ ಸಂಭವಿಸಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.