ADVERTISEMENT

ಅಮರ್‌ ಸಿಂಗ್‌ ಜೀವನ್ಮರಣ ಹೋರಾಟ: ಬಚ್ಚನ್‌ ಕುಟುಂಬ ವಿರುದ್ಧದ ಹೇಳಿಕೆಗಳಿಗೆ ವಿಷಾದ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 11:33 IST
Last Updated 18 ಫೆಬ್ರುವರಿ 2020, 11:33 IST
   

ಸಮಾಜವಾದಿ ಪಕ್ಷದ ಮಾಜಿ ನಾಯಕ, ರಾಜ್ಯಸಭೆಯ ಸದಸ್ಯ ಅಮರ್‌ ಸಿಂಗ್‌ ಅವರು ಕಿಡ್ನಿ ವೈಫಲ್ಯವೂ ಸೇರಿ ಹಲವು ಕಾಯಿಲೆಗಳಿಂದ ಬಳಲುತ್ತಿದ್ದು, ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಅವರು, ಹಿಂದೊಮ್ಮೆ ಅಮಿತಾಬ್‌ ಬಚ್ಚನ್‌ ಅವರ ವಿರುದ್ಧ ಆಡಿದ್ದ ವಿವಾದಾತ್ಮಕ ಮಾತುಗಳಿಗೆ ಸದ್ಯ ಕ್ಷಮೆ ಕೋರಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅಮರ್‌ ಸಿಂಗ್‌, ‘ಇಂದು ನನ್ನ ತಂದೆಯ ಪುಣ್ಯತಿಥಿ. ಇದೇ ವಿಚಾರವಾಗಿ ಇಂದು ಅಮಿತಾಬ್‌ ಬಚ್ಚನ್‌ ಅವರು ನನಗೆ ಸಂದೇಶ ಕಳುಹಿಸಿದ್ದರು. ಅಮಿತಾಬ್‌ ಬಚ್ಚನ್‌ ಮತ್ತು ಅವರ ಕುಟುಂಬದ ವಿರುದ್ಧ ಹಿಂದೊಮ್ಮೆ ನೀಡಿದ್ದ ಅತಿರೇಕದ ಹೇಳಿಕೆಗಳಿಗೆ ಸದ್ಯ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ನಾನು ಈಗ ವಿಷಾದ ವ್ಯಕ್ತಪಡಿಸುತ್ತೇನೆ. ಅವರಿಗೆ ದೇವರು ಒಳಿತು ಮಾಡಲಿ’ ಎಂದು ಟ್ವೀಟ್‌ ಮಾಡಿದ್ದಾರೆ.

ಬೂಟಾಟಿಕೆ ನಿಲ್ಲಿಸಿ ಜಯಾ ಬಚ್ಚನ್‌ ಅವರೇ ಎಂದಿದ್ದ ಅಮರ್‌

ADVERTISEMENT

ಒಂದು ಕಾಲಕ್ಕೆ ಅಮಿತಾಬ್‌ ಬಚ್ಚನ್‌ ಕುಟುಂಬಕ್ಕೆ ಅತ್ಯಾಪ್ತರಾಗಿದ್ದ ಅಮರ್‌ ಸಿಂಗ್‌ ನಂತರದಲ್ಲಿ ಬಚ್ಚನ್‌ ಕುಟುಂಬ ಸದಸ್ಯರ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಲಾರಂಭಿಸಿದ್ದರು. 2019ರ ಜುಲೈನಲ್ಲಿ ‘ಬೂಟಾಟಿಕೆ ನಿಲ್ಲಿಸಿ ಜಯಾ ಬಚ್ಚನ್‌ ಅವರೇ’ ಎಂಬ ಶೀರ್ಷಿಕೆಯೊಂದಿಗೆ ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದ ಅಮರ್‌ ಸಿಂಗ್‌, ಅಮಿತಾಬ್‌ ಬಚ್ಚನ್‌ ಮತ್ತು ಐಶ್ವರ್ಯಾ ರೈ ಬಚ್ಚನ್‌ ಅವರು ಸಿನಿಮಾದಲ್ಲಿ ಅಸಭ್ಯ ಪಾತ್ರಗಳನ್ನು ಮಾಡಿದ್ದಾರೆ ಎಂದು ಟೀಕಿಸಿದ್ದರು. ದೂಮ್‌ ಚಿತ್ರದ ಹಾಡೊಂದರಲ್ಲಿ ರಿಮಿ ಸೆನ್‌ ಅವರೊಂದಿಗೆ ಅಭಿನಯಿಸಿದ್ದ ಅಭಿಷೇಕ್‌ ಬಚ್ಚನ್‌ ಅವರ ಕುರಿತೂ ಈ ವಿಡಿಯೊದಲ್ಲಿ ಅವರು ಟೀಕೆ ಮಾಡಿದ್ದರು.

ಅಮರ್‌ ಸಿಂಗ್‌ ಟೀಕೆಯ ವಿಡಿಯೊ

ಅಮರ್‌ ಸಿಂಗ್‌ ಜೀವನ್ಮರಣ ಹೋರಾಟ

2013ರಲ್ಲೇ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿದ್ದ ಅಮರ್‌ ಸಿಂಗ್‌ ಅವರ ಆರೋಗ್ಯ ಪರಿಸ್ಥಿತಿ ಸದ್ಯ ತೀವ್ರ ಹದಗೆಟ್ಟಿದೆ. ಕೃಷಕಾಯರಾಗಿರುವ ಅವರು ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೇ ಬರೆದುಕೊಂಡಿರುವಂತೆ ಅಮರ್‌ ಸಿಂಗ್‌ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.