ADVERTISEMENT

ಸ್ಪೋಟಕ ತುಂಬಿದ ವಾಹನ ಪತ್ತೆ ಪ್ರಕರಣ: ದುಬಾರಿ ಬೆಲೆ ಬೈಕ್ ವಶಪಡಿಸಿಕೊಂಡ ಎನ್‌ಐಎ

ಆರೋಪಿ ಸಚಿನ್ ವಾಜೆ ಸಹವರ್ತಿ ಮಹಿಳೆಯ ಹೆಸರಿಲ್ಲಿದ್ದ ಬೈಕ್

ಪಿಟಿಐ
Published 5 ಏಪ್ರಿಲ್ 2021, 10:05 IST
Last Updated 5 ಏಪ್ರಿಲ್ 2021, 10:05 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ನಿವಾಸ ಸಮೀಪ ಸ್ಪೋಟಕ ತುಂಬಿದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬಾರಿ ಬೆಲೆಯ ಬೈಕ್‌ ಅನ್ನು ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ) ವಶಪಡಿಸಿಕೊಂಡಿದೆ.

ಈ ಬೈಕ್‌, ಪ್ರಕರಣದ ಆರೋಪಿ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಸಹವರ್ತಿ ಎಂದು ಹೇಳಲಾದ ಮಹಿಳೆಯ ಹೆಸರಲ್ಲಿದೆ. ಎನ್‌ಐಎ ಶುಕ್ರವಾರ ಮಹಿಳೆಯ ವಿಚಾರಣೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಎನ್‌ಐಎ ಅಧಿಕಾರಿಗಳು ಸೋಮವಾರ ಆ ಬೈಕ್‌ನ್ನು ಟೆಂಪೊದಲ್ಲಿ ದಕ್ಷಿಣ ಮುಂಬೈನ ತಮ್ಮ ಕಚೇರಿಗೆ ತಂದಿದ್ದಾರೆ ಎಂದು ಅವರು ಹೇಳಿದರು.

ಮಹಿಳೆ ವಾಸವಿದ್ದ ಮುಂಬೈ ಮೀರಾ ರಸ್ತೆಯಲ್ಲಿರುವ ಫ್ಲ್ಯಾಟ್‌ ಅನ್ನು ಗುರುವಾರ ಎನ್‌ಐಎ ತಂಡ ಪರಿಶೀಲಿಸಿದೆ. ಮುಕೇಶ್ ಅಂಬಾನಿ ನಿವಾಸ 'ಆಂಟಿಲಿಯಾ' ಬಳಿ ಸ್ಫೋಟಕಗಳು ತುಂಬಿದ ವಾಹನ ಪತ್ತೆಯಾಗುವ ಮುನ್ನ ಫೆಬ್ರವರಿ 16 ರಂದು ಇದೇ ಮಹಿಳೆ ವಾಜೆಯವರೊಂದಿಗೆ ನಗರದಲ್ಲಿರುವ ಹೋಟೆಲ್‌ಗೆ ತೆರಳಿದ್ದರು ಎಂದು ಎನ್‌ಐಎ ಶಂಕಿಸಿರುವುದಾಗಿ ಮೂಲಗಳು ತಿಳಿಸಿವೆ.

ADVERTISEMENT

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿನ್ ವಾಜೆ ಬಳಸುತ್ತಿದ್ದ ಎಂಟು ದುಬಾರಿ ಬೆಲೆಯ ವಾಹನಗಳನ್ನು ಎನ್‌ಐಎ ತಂಡ ವಶಪಡಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.