ಮೋಹನ್ ಯಾದವ್
ಭೋಪಾಲ್: ಕಾಂಗ್ರೆಸ್ ಪಕ್ಷವು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸದಾ ಅಗೌರವ ತೋರುತಿತ್ತು. ಕಾಂಗ್ರೆಸ್ ತನ್ನ ಪಾಪಗಳಿಗೆ ಕ್ಷಮೆಯಾಚಿಸಬೇಕೆಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಸೋಮವಾರ ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ದೆಹಲಿಯಲ್ಲಿ ನಿಧನರಾದಾಗ ಕಾಂಗ್ರೆಸ್ ಅವರ ಅಂತ್ಯಕ್ರಿಯೆಯನ್ನು ನಡೆಸಲು ನಿರಾಕರಿಸಿತು. ಅವರ ಮೃತದೇಹವನ್ನು ಮುಂಬೈಗೆ ವಿಮಾನದ ಮೂಲಕ ಕೊಂಡೊಯ್ಯುವಂತೆ ಒತ್ತಾಯಿಸಿತು ಎಂದು ಯಾದವ್ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ತನ್ನ 55 ವರ್ಷಗಳ ಆಳ್ವಿಕೆಯಲ್ಲಿ ಅಂಬೇಡ್ಕರ್ ಅವರ ಜನ್ಮಸ್ಥಳವಾದ ಮಹೋಗೆ ಏನು ಮಾಡಿದೆ ಎಂದು ಪ್ರಶ್ನಿಸಿದ ಯಾದವ್, ಅವರ ಜನ್ಮಸ್ಥಳವನ್ನು ಕಡೆಗಣಿಸಲು ಸಹ ಪ್ರಯತ್ನಿಸಿತ್ತು ಎಂದು ಕಿಡಿಕಾರಿದ್ದಾರೆ.
'ಅಂಬೇಡ್ಕರ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಬಿಡಲಿಲ್ಲ. ಕಾಂಗ್ರೆಸ್ ಅವರಿಗೆ ಯಾವಗಲೂ ಅಗೌರವ ಮತ್ತು ಅವಮಾನವನ್ನು ಮಾಡಿದೆ. ಕಾಂಗ್ರೆಸ್ ಮಾಡಿದ ಪಾಪಗಳಿಗೆ ಕ್ಷಮೆಯಾಚಿಸಬೇಕೆಂದು' ಯಾದವ್ ಹೇಳಿದ್ದಾರೆ.
ಗ್ವಾಲಿಯರ್‌ನ ಹೈಕೋರ್ಟ್ ಪೀಠದ ಸಮುಚ್ಚಯದ ಆವರಣದಲ್ಲಿ ಬಿ.ಆರ್.ಅಂಬೇಡ್ಕರ್ ಪ್ರತಿಮೆ ಪ್ರತಿಸ್ಥಾಪನೆ ತಡೆದಿರುವುದರ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರ ಒತ್ತಡ ಇದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಬೆಳವಣಿಗೆಗಳ ನಡುವೆ ಯಾದವ್ ಈ ಹೇಳಿಕೆ ನೀಡಿದ್ದಾರೆ.
'ಅಂಬೇಡ್ಕರ್ ಅವರು 370ನೇ ವಿಧಿಯನ್ನು ವಿರೋಧಿಸಿದ್ದರೂ, ಆದರೆ ಕಾಂಗ್ರೆಸ್ ಅದನ್ನು ಸಂವಿಧಾನದಲ್ಲಿ ಸೇರಿಸಿತ್ತು' ಎಂದು ಯಾದವ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.