ADVERTISEMENT

ಬ್ರಿಟನ್‌ಗೆ ವಿಮಾನ ಸಂಚಾರ ಪುನರಾರಂಭ: ದೆಹಲಿಗೆ ಬಂದಿಳಿದ 256 ಪ್ರಯಾಣಿಕರು

ಏಜೆನ್ಸೀಸ್
Published 8 ಜನವರಿ 2021, 6:43 IST
Last Updated 8 ಜನವರಿ 2021, 6:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಹೊಸ ಸ್ವರೂಪದ ಕೊರೊನಾ ವೈರಸ್ ವೇಗವಾಗಿ ಹರಡುತ್ತಿರುವ ಆತಂಕದ ಮಧ್ಯೆ 246 ಪ್ರಯಾಣಿಕರೊಂದಿಗೆ ಬ್ರಿಟನ್‌ನ ಲಂಡನ್‌ನಿಂದ ಹೊರಟ ಏರ್ ಇಂಡಿಯಾ ವಿಮಾನವು ನವದೆಹಲಿಗೆ ಬಂದಿಳಿದಿದೆ.

ಬ್ರಿಟನ್‌ನಲ್ಲಿ ಮೊದಲ ಬಾರಿಗೆ ಪತ್ತೆಯಾಗಿರುವ ಕೊರೊನಾ ವೈರಾಣು ದೇಶದಲ್ಲೂ ಕಾಣಿಸಿಕೊಂಡ ಬೆನ್ನಲ್ಲೇ ಡಿಸೆಂಬರ್ 23ರಿಂದ ಬ್ರಿಟನ್‌ಗೆ ಹೋಗುವ ಹಾಗೂ ಬರುವ ಎಲ್ಲ ವಿಮಾನಯಾನವನ್ನು ತಾತ್ಕಾಲಿಕವಾಗಿ ಸ್ಧಗಿತಗೊಳಿಸಲಾಗಿತ್ತು. ಬಳಿಕ ವರ್ಷಾಂತ್ಯದಲ್ಲಿ ನಿರ್ಬಂಧವನ್ನು ಜನವರಿ 7ರ ವರೆಗೆ ವಿಸ್ತರಿಸಲಾಗಿತ್ತು.

ಬ್ರಿಟನ್ ಹಾಗೂ ಭಾರತ ನಡುವಣ ವಿಮಾನಯಾನ ಕಾರ್ಯಾಚರಣೆ ಇಂದು (ಶುಕ್ರವಾರ) ಪುನರಾರಂಭಗೊಂಡಿದೆ. ಇದರಂತೆ ಮೊದಲ ವಿಮಾನ ಲಂಡನ್‌ನಿಂದ ದೆಹಲಿಗೆ ಬಂದಿಳಿದಿದೆ.

ADVERTISEMENT

ಭಾರತದಿಂದ ಬ್ರಿಟನ್‌ಗೆ ವಿಮಾನಯಾನ ಬುಧವಾರದಂದೇ ಪುನರಾರಂಭಗೊಂಡಿತ್ತು. ದೇಶದಲ್ಲಿ ರೂಪಾಂತರಿ ಕೋವಿಡ್-19 ವೈರಸ್‌ ಸಂಖ್ಯೆ 73ಕ್ಕೆ ಏರಿಕೆಯಾಗಿದೆ.

ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಮಾಹಿತಿಯಂತೆ, ಜನವರಿ 23ರ ವರೆಗೆ ತಲಾ 15 ವಿಮಾನಗಳು ಸೇರಿದಂತೆ ಭಾರತ ಹಾಗೂ ಬ್ರಿಟನ್ ನಡುವೆ ವಾರಕ್ಕೆ 30 ವಿಮಾನಗಳು ಹಾರಾಟ ನಡೆಸಲಿವೆ.

ಆಗಮನ ಹಾಗೂ ಅಲ್ಲಿಂದ ಗಮ್ಯಸ್ಥಾನ ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳ ನಡುವೆ ಕನಿಷ್ಠ 10 ತಾಸುಗಳ ಅಂತರವನ್ನು ಕಾಪಾಡಿಕೊಳ್ಳುವಂತೆ ಪ್ರಯಾಣಿಕರಿಗೆ ದೆಹಲಿ ವಿಮಾನ ನಿಲ್ದಾಣವು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.