ADVERTISEMENT

ಪಶ್ಚಿಮ ಬಂಗಾಳ ಚುನಾವಣೆ: ಸಿಂಗೂರ್‌ಗೆ ಕೈಗಾರಿಕೆ –ಅಮಿತ್ ಶಾ ಭರವಸೆ

ಕೈಗಾರಿಕೆ ಸ್ಥಾಪನೆಗೆ ಅಡ್ಡಿ, ಉದ್ಯೋಗ ನಷ್ಟ ಆರೋಪ ಮುಂದಿಟ್ಟು ಮಮತಾ ವಿರುದ್ಧ ಆರೋಪ

ಪಿಟಿಐ
Published 7 ಏಪ್ರಿಲ್ 2021, 19:31 IST
Last Updated 7 ಏಪ್ರಿಲ್ 2021, 19:31 IST
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಿಕ್ಷಾ ಚಾಲಕ ಮತ್ತು ಬಿಜೆಪಿ ಕಾರ್ಯಕರ್ತರೊಬ್ಬರ ಮನೆಯಲ್ಲಿ ಬುಧವಾರ ಮಧ್ಯಾಹ್ನ ಊಟ ಮಾಡಿದರು ಪಿಟಿಐ ಚಿತ್ರ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಿಕ್ಷಾ ಚಾಲಕ ಮತ್ತು ಬಿಜೆಪಿ ಕಾರ್ಯಕರ್ತರೊಬ್ಬರ ಮನೆಯಲ್ಲಿ ಬುಧವಾರ ಮಧ್ಯಾಹ್ನ ಊಟ ಮಾಡಿದರು ಪಿಟಿಐ ಚಿತ್ರ   

ಸಿಂಗೂರು:ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಂದು ಕಾಲದಲ್ಲಿ ಭೂ ಸ್ವಾಧೀನ ವಿರೋಧಿ ಚಳವಳಿಯ ಕೇಂದ್ರ ಸ್ಥಾನವಾಗಿದ್ದ ಸಿಂಗೂರ್‌ನಲ್ಲಿ ಬುಧವಾರ ರೋಡ್‌ ಷೋ ನಡೆಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಪ್ರದೇಶವನ್ನು ಅತ್ಯಂತ ವೇಗವಾಗಿ ಕೈಗಾರಿಕಾ ಕೇಂದ್ರವಾಗಿಸುವುದಾಗಿ ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಹಿಂದೆ ಇದೇ ಸ್ಥಳದಲ್ಲಿ ರ್‍ಯಾಲಿ ನಡೆಸಿದ್ದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ‘ಅಡ್ಡಿಪಡಿಸುವಿಕೆ ಮನಸ್ಥಿತಿ’ಯಿಂದಾಗಿ ಪಶ್ಚಿಮ ಬಂಗಾಳವು ಕೈಗಾರಿಕೆಗಳು ಮತ್ತು ಉದ್ಯೋಗದಿಂದ ವಂಚಿತವಾಗಿದೆ ಎಂದು ಮೋದಿ ಆರೋಪಿಸಿದ್ದರು. ರಾಜ್ಯದಲ್ಲಿ ಕೈಗಾರಿಕೆಗಳು ಕುಗ್ಗುತ್ತಿವೆ ಮತ್ತು ಉದ್ಯೋಗ ನಷ್ಟವಾಗುತ್ತಿದೆ ಎಂಬ ಆರೋಪವನ್ನು ಮಮತಾ ವಿರುದ್ಧ ಬಿಜೆಪಿ ಬಳಸುತ್ತಿದೆ.

ಶಾ ಅವರು ಅಲಂಕೃತ ವಾಹನದಲ್ಲಿ ನಿಂತು ಬಿಜೆಪಿ ಅಭ್ಯರ್ಥಿ ರವೀಂದ್ರನಾಥ ಭಟ್ಟಾಚಾರ್ಯ ಪರ ಮತಯಾಚಿಸಿದರು. ಟಿಎಂಸಿಯಲ್ಲಿದ್ದ ಭಟ್ಟಾಚಾರ್ಯ ಅವರು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದಾರೆ.

ADVERTISEMENT

ರೋಡ್‌ ಷೋ ಸಂದರ್ಭದಲ್ಲಿ ಶಾ ಅವರು ಮಾಧ್ಯಮ ಪ್ರತಿನಿಧಿಗಳ ಜತೆಗೂ ಮಾತನಾಡಿದರು. 2006ರ ಚಳವಳಿಯ ಬಳಿಕ ಈ ಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿ ಆಗಿಲ್ಲ. ಬಿಜೆಪಿಯ ಮುಂದಿನ ಸರ್ಕಾರದ ಇಲ್ಲಿ ಕೈಗಾರಿಕಾ ಅಭಿವೃದ್ಧಿ ಮಾಡಲಿದೆ ಎಂದರು.

‘ಇಲ್ಲಿ ನಾವು ಕೈಗಾರಿಕಾ ಅಭಿವೃದ್ಧಿ ಮಾಡಲಿದ್ದೇವೆ. ಈ ಪ್ರದೇಶವು ಆಲೂಗಡ್ಡೆಗೆ ಪ್ರಸಿದ್ಧವಾಗಿದೆ. ಇದನ್ನು ಬಳಸುವ ಕೈಗಾರಿಕೆಗಳ ಅಭಿವೃದ್ಧಿಗೆ ₹500 ಕೋಟಿ ಹೂಡಿಕೆಯ ಯೋಜನೆ ರೂಪಿಸಲಾಗುವುದು ಎಂಬ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.