ADVERTISEMENT

ಮೋದಿ ನೇತೃತ್ವದಲ್ಲಿ ಭಾರತ ಕೋವಿಡ್ ಗೆದ್ದಿದೆ: ಅಮಿತ್ ಶಾ

ಪಿಟಿಐ
Published 7 ಆಗಸ್ಟ್ 2021, 11:09 IST
Last Updated 7 ಆಗಸ್ಟ್ 2021, 11:09 IST
ಅಮಿತ್ ಶಾ
ಅಮಿತ್ ಶಾ   

ಅಹಮದಾಬಾದ್ (ಪಿಟಿಐ): ‘ಕೋವಿಡ್‌ ಅವಧಿಯಲ್ಲೂ ದೇಶದಲ್ಲಿ ಪ್ರಗತಿಯ ವೇಗ ಕುಗ್ಗದಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೋಡಿಕೊಂಡಿದ್ದು, ಭಾರತವು ಕೋವಿಡ್ ಸವಾಲು ಗೆದ್ದಿದೆ’ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.

‘ಕೋವಿಡ್‌ ಇಡೀ ಜಗತ್ತನ್ನು ಬಾಧಿಸಿದೆ. ಈ ಅವಧಿಯಲ್ಲಿ ಇತರೆ ದೇಶಗಳಲ್ಲಿ ಅಭಿವೃದ್ಧಿಯ ಚಕ್ರ ಸ್ಥಗಿತಗೊಂಡಿದ್ದರೆ, ಭಾರತದಲ್ಲಿ ಚಲನೆಯಲ್ಲಿತ್ತು. ಕೊರೊನಾ ಗೆಲ್ಲುವುದರೊಂದಿಗೆ ಅಭಿವೃದ್ಧಿಯನ್ನು ಸಾಧಿಸಿದೆವು’ ಎಂದು ಶನಿವಾರ ಹೇಳಿದರು.

ಗುಜರಾತ್ ಮುಖ್ಯಮಂತ್ರಿ ವಿಜಯ್‌ ರೂಪಾಣಿ ಅವರು ಮುಖ್ಯಮಂತ್ರಿಯಾಗಿ ಐದು ವರ್ಷಗಳಾದ ನಿಮಿತ್ತ ಏರ್ಪಡಿಸಿದ್ದ ‘ವಿಜಯ್‌ ದಿವಸ್’ ಕಾರ್ಯಕ್ರಮದಲ್ಲಿ ವರ್ಚುವಲ್‌ ಸ್ವರೂಪದಲ್ಲಿ ಅವರು ಮಾತನಾಡುತ್ತಿದ್ದರು.

ADVERTISEMENT

₹ 5,300 ಕೋಟಿ ಮೌಲ್ಯದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದ ಅವರು, ಈ ಪೈಕಿ ₹ 900 ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳನ್ನು ತಾವು ಪ್ರತಿನಿಧಿಸುವ ಗಾಂಧಿನಗರ ಕ್ಷೇತ್ರದಲ್ಲಿ ಜಾರಿಯಾಗಲಿದೆ ಎಂದರು.

ನೀರು ಪೂರೈಕೆ, ಮನೆ, ರಸ್ತೆ, ಸೇತುವೆಗಳ ನಿರ್ಮಾಣ ಸೇರಿದಂತೆ ₹ 3,222 ಕೋಟಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಾಗಿದೆ. ಇದರರ್ಥ ಕೊರೊನಾ ಅವಧಿಯಲ್ಲಿಇವುಗಳನ್ನು ಜಾರಿಗೊಳಿಸಲಾಗಿದೆ ಎಂಬುದಾಗಿದೆ ಎಂದರು.

ನಾಯಕ ಮುಖ್ಯಮಂತ್ರಿಯಾಗಿ ಇಲ್ಲದ ಅವಧಿಯಲ್ಲೂ ಪ್ರಗತಿ ನಿರಂತರವಾಗಿ ಇರುವಂತೆ ವ್ಯವಸ್ಥೆಯನ್ನು ನರೇಂದ್ರ ಮೋದಿ ನಿರೂಪಿಸಿದ್ದಾರೆ. ಮೋದಿ ಅವರು ಪ್ರಧಾನಿಯಾಗಿ ಹೋದ ಬಳಿಕವೂ ಇಲ್ಲಿ ಅಭಿವೃದ್ಧಿ ಮುನ್ನಡೆದಿದೆ. ಮುಖ್ಯಮಂತ್ರಿ ವಿಜಯ್‌ ರೂಪಾಣಿ ಅದನ್ನು ಮುಂದುವರಿಸಿದ್ದಾರೆ. ರಾಜ್ಯದ ಅಭಿವೃದ್ಧಿ ಜೊತೆಗೆ ಶಾಂತಿ, ಸೌಹಾರ್ದಕ್ಕೂ ಒತ್ತು ನೀಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.