ADVERTISEMENT

ಚೆನ್ನೈ | ಅಮೋನಿಯಾ ಅನಿಲ ಸೋರಿಕೆ: ಹಲವರು ಅಸ್ವಸ್ಥ

ಪಿಟಿಐ
Published 27 ಡಿಸೆಂಬರ್ 2023, 14:07 IST
Last Updated 27 ಡಿಸೆಂಬರ್ 2023, 14:07 IST
<div class="paragraphs"><p>ಚೆನ್ನೈ ಬಳಿಯ ಎನ್ನೋರ್‌ನಲ್ಲಿರುವ ರಸಗೊಬ್ಬರ ತಯಾರಿಕಾ ಘಟಕದ ಮುಂಭಾಗದಲ್ಲಿ ಸ್ಥಳೀಯ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು </p></div>

ಚೆನ್ನೈ ಬಳಿಯ ಎನ್ನೋರ್‌ನಲ್ಲಿರುವ ರಸಗೊಬ್ಬರ ತಯಾರಿಕಾ ಘಟಕದ ಮುಂಭಾಗದಲ್ಲಿ ಸ್ಥಳೀಯ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು

   

–ಪಿಟಿಐ ಚಿತ್ರ

ಚೆನ್ನೈ: ಉತ್ತರ ಚೆನ್ನೈನ ರಸಗೊಬ್ಬರ ತಯಾರಿಕಾ ಘಟಕದಿಂದ ಸಮುದ್ರಕ್ಕೆ ಹಾದುಹೋಗಿರುವ ಪೈಪ್‌ಲೈನ್‌ನಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿ ಸ್ಥಳೀಯ ನಿವಾಸಿಗಳು ಅಸ್ವಸ್ಥರಾಗಿದ್ದು, 25 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಮಂಗಳವಾರ ರಾತ್ರಿ 11.45ಕ್ಕೆ ಅನಿಲ ಸೋರಿಕೆಯಾಗಿದ್ದು, ಅತಿಯಾದ ದುರ್ಗಂಧದಿಂದ ಜನರು ಅಸ್ವಸ್ಥರಾಗಿದ್ದಾರೆ. ಕೆಲವರಲ್ಲಿ ಉಸಿರಾಟದ ತೊಂದರೆ, ಮೂರ್ಛೆ, ವಾಕರಿಕೆ, ಗಂಟಲು ಮತ್ತು ಎದೆಯಲ್ಲಿ ಉರಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮನೆಯೊಳಗೆ ಮಲಗಿದ್ದ ಜನರು ಆತಂಕಗೊಂಡು ರಸ್ತೆಗೆ ಓಡಿ ಬಂದಿದ್ದಾರೆ. ಮಕ್ಕಳು ಸೇರಿದಂತೆ ಅಸ್ವಸ್ಥರಾಗಿದ್ದವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.

ಉತ್ತರ ಚೆನ್ನೈನ ಚಿನ್ನ ಕುಪ್ಪಂ, ಪೆರಿಯ ಕುಪ್ಪಂ, ನೇತಾಜಿ ನಗರ, ಬರ್ಮಾ ನಗರದ ನಿವಾಸಿಗಳು ಅನಿಲ ಸೋರಿಕೆಯಿಂದ ತೊಂದರೆ ಅನುಭವಿಸಿದ್ದಾರೆ. ಈ ಪ್ರದೇಶಗಳಲ್ಲಿ ಹೆಚ್ಚಾಗಿ ಮೀನುಗಾರರು ವಾಸಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಸಮುದ್ರದ ದಡದ ಸಮೀಪ ಪೈಪ್‌ಲೈನ್‌ನಿಂದ ಅನಿಲ ಸೋರಿಕೆಯಾಗಿದ್ದು, ಭಾರಿ ಸದ್ದು ಕೇಳಿಸಿದೆ. ನೀರು ಕೂಡ ಚಿಮ್ಮುತ್ತಿರುವುದನ್ನು ನೋಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

‘ರಸಗೊಬ್ಬರ ತಯಾರಿಕಾ ಘಟಕ ಆವರಣದಿಂದ ಹೊರಗೆ ಸಮುದ್ರಕ್ಕೆ ಹಾದುಹೋಗಿರುವ ಪೈಪ್‌ಲೈನ್‌ನಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿದೆ. ಕೂಡಲೇ ಗುಣಮಟ್ಟ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ಅನುಸರಿಸಲಾಗಿದೆ ಮತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ’ ಎಂದು ಮುರುಗಪ್ಪ ಸಮೂಹದ ಕೋರಮಂಡಲ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ತಿಳಿಸಿದೆ.

‘ಕೆಲವು ಮಂದಿ ಸ್ಥಳೀಯರು ಅಸ್ವಸ್ಥರಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಸುರಕ್ಷಿತರಾಗಿದ್ದಾರೆ. ಘಟನೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ’ ಎಂದಿದೆ.

ರಸಗೊಬ್ಬರ ತಯಾರಿಕಾ ಘಟಕವನ್ನು ಕೂಡಲೇ ಮುಚ್ಚಬೇಕೆಂದು ಆಗ್ರಹಿಸಿ ಸ್ಥಳೀಯರು ಕಂಪನಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.