ಲಾರಿಗೆ ರೈಲು ಡಿಕ್ಕಿ ಹೊಡೆದಿರುವುದು
– ಎಕ್ಸ್ ಚಿತ್ರ
ಮುಂಬೈ: ವೇಗವಾಗಿ ಬಂದು ಲೆವೆಲ್ ಕ್ರಾಸಿಂಗ್ ಬೇಧಿಸಿ ಹಳಿಯಲ್ಲಿ ಬಾಕಿಯಾಗಿದ್ದ ಟ್ರಕ್ ಒಂದಕ್ಕೆ ಅಮರಾವತಿ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಜಲಂಗಾವ್‌ನಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಿಗ್ಗೆ ಸುಮಾರು 4.30ರ ಹೊತ್ತಿಗೆ ಬೋದ್‌ವಾಡ್ ರೈಲು ನಿಲ್ದಾಣದ ಸಮೀಪ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಉಂಟಾಗಿಲ್ಲ. ಈ ಮಾರ್ಗದಲ್ಲಿ ರೈಲು ಸೇವೆ ಸುಮಾರು 6 ಗಂಟೆ ವ್ಯತ್ಯಯವಾಗಿತ್ತು.
ಮುಂಬೈನಿಂದ ಅಮರಾತಿಗೆ ಸಾಗುತ್ತಿದ್ದ ರೈಲು 12111 ಸ್ಥಳದಲ್ಲಿ ಸಾಗುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಲೆವೆಲ್ ಕ್ರಾಸಿಂಗ್‌ಗೆ ಡಿಕ್ಕಿ ಹೊಡೆದು ಹಳಿಯಲ್ಲಿ ಬಂದು ನಿಂತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಮಯ ಪ್ರಜ್ಞೆ ಮೆರೆದ ಲೊಕೊ ಪೈಲಟ್ ಕೂಡಲೇ ರೈಲನ್ನು ನಿಯಂತ್ರಿಸಿದ್ದಾರೆ. ಇಲ್ಲದಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು ಎಂದು ಅವರು ಹೇಳಿದ್ದಾರೆ.
ರೈಲು ಡಿಕ್ಕಿ ಹೊಡೆದ ಕೂಡಲೇ, ಕೆಳಗಿಳಿದ ಚಾಲಕ ಸಹಾಯಕ್ಕಾಗಿ ಸ್ಥಳದಲ್ಲಿದ್ದವರನ್ನು ಕೇಳಿಕೊಂಡಿದ್ದಾರೆ.
ರೈಲ್ವೆ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಪೊಲೀಸರು, ಸರ್ಕಾರಿ ರೈಲ್ವೆ ಪೊಲೀಸ್ ಹಾಗೂ ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಹಳಿಯಿಂದ ಟ್ರಕ್ ಅನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದ್ದಾರೆ.
ರೈಲು ಎಂಜಿನ್‌ಗೆ ಟ್ರಕ್ ಸಿಕ್ಕಿ ಹಾಕಿಕೊಂಡಿದ್ದರಿಂದ ರೈಲ್ವೆ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಗ್ಯಾಸ್ ಕಟ್ಟರ್ ಹಾಗೂ ಅರ್ಥ್ ಮೂವರ್‌ಗಳನ್ನು ಬಳಸಿ ಕಾರ್ಯಾಚರಣೆ ನಡೆಸಲಾಗಿದೆ.
ಬೆಳಿಗ್ಗೆ 10.20ರ ಸುಮಾರಿಗೆ ಹಳಿಯಲ್ಲಿದ್ದ ಟ್ರಕ್ ಅನ್ನು ತೆರವುಗೊಳಿಸಲಾಗಿದೆ. ರೈಲು ಮುಂದಿನ ನಿಲ್ದಾಣಕ್ಕೆ ತೆರಳಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.