ADVERTISEMENT

ಅಮೃತಸರ ದಾಳಿ: ಎನ್‌ಐಎ ತನಿಖೆ, ದಾಳಿಕೋರರ ಮಾಹಿತಿ ನೀಡಿದರೆ ₹50 ಲಕ್ಷ ಬಹುಮಾನ 

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 5:19 IST
Last Updated 19 ನವೆಂಬರ್ 2018, 5:19 IST
ದಾಳಿ ನಡೆದ ಸ್ಥಳದಲ್ಲಿ ಎನ್‌ಐಎ ತಂಡ ತನಿಖೆ ನಡೆಸುತ್ತಿದೆ. ಚಿತ್ರ: ಎಎನ್‌ಐ ಟ್ವೀಟ್‌
ದಾಳಿ ನಡೆದ ಸ್ಥಳದಲ್ಲಿ ಎನ್‌ಐಎ ತಂಡ ತನಿಖೆ ನಡೆಸುತ್ತಿದೆ. ಚಿತ್ರ: ಎಎನ್‌ಐ ಟ್ವೀಟ್‌   

ಅಮೃತಸರ:ಪಂಜಾಬ್‌ನ ಅಮೃತಸರದಲ್ಲಿ ನಿರಂಕಾರಿ ಪಂಥದ ಪ್ರಾರ್ಥನಾ ಮಂದಿರದ ಮೇಲೆ ಭಾನುವಾರ ನಡೆದ ಗ್ರೆನೇಡ್ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಕೈಗೊಂಡಿದೆ.

ದಾಳಿಯಲ್ಲಿ ಮೂವರು ಮೃತಪಟ್ಟಿದ್ದು 15 ಜನರಿಗೆ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಸ್ಫೋಟ ತಜ್ಞರೊಟ್ಟಿಗೆ ಭಾನುವಾರ ರಾತ್ರಿಯೇ ಬಂದಿರುವ ತನಿಖಾ ತಂಡ ಅಗತ್ಯ ಮಾಹಿತಿ ಕಲೆಹಾಕುತ್ತಿದೆ. ಜತೆಗೆ, ಡಿಜಿಪಿ, ಗುಪ್ತಚರ ಇಲಾಖೆ ಡಿಜಿ ಅವರೊಟ್ಟಿಗೆ ಚರ್ಚೆ ನಡೆಸಿ ಮಾಹಿತಿ ಸಂಗ್ರಹಿಸಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಸೋಮವಾರ ತಿಳಿಸಿದ್ದಾರೆ.

ದಾಳಿಕೋರರ ಮಾಹಿತಿ ನೀಡಿದರೆ ₹ 50 ಲಕ್ಷ ಬಹುಮಾನ
ದಾಳಿ ನಡೆಸಿದವರ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದ್ದು, ದಾಳಿಕೋರರ ಮಾಹಿತಿ ನೀಡಿದರೆ ₹ 50 ಲಕ್ಷ ಬಹುಮಾನ ನೀಡಲಾಗುವುದು ಎಂದು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದ್ರರ್‌ ಸಿಂಗ್‌ ಘೋಷಿಸಿದ್ದಾರೆ.

ADVERTISEMENT

ಮಾಹಿತಿ ಲಭ್ಯವಿದ್ದಲ್ಲಿ ಪೊಲೀಸ್‌ ಸಹಾಯವಾಣಿ 181ಗೆ ನೀಡಬಹುದು. ಬಹುಮಾನ ನೀಡುವುದರ ಜತೆಗೆ, ಅವರ ಹೆಸರನ್ನು ಗೌಪ್ಯವಾಗಿ ಇರಿಸಲಾಗುವುದು ಎಂದು ಸಿಎಂ ಮಾಧ್ಯಮ ಸಲಹೆಗಾರ ಹೇಳಿದ್ದಾರೆ.

ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ: ಪೋಲ್ಕ
‘ಅಮೃತಸರದಲ್ಲಿ ನಡೆದ ಸ್ಫೋಟ ಘಟನೆ ಸಂಬಂಧ ನಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ದಯವಿಟ್ಟು ಪೂರ್ಣ ವಿಡಿಯೊವನ್ನು ನೋಡಿ. ಇಡೀ ಹೇಳಿಕೆ ಕಾಂಗ್ರೆಸ್‌ನ ವಿರುದ್ಧವಾಗಿತ್ತು. ಆದರೆ, ಗೌರವಾನ್ವಿತ ಸೇನಾ ಮುಖ್ಯಸ್ಥರ ವಿರುದ್ಧವಲ್ಲ. ಇದಕ್ಕೆ ನಮ್ಮ ವಿಷಾದವಿದೆ’ ಎಂದು ದೆಹಲಿ ಹೈಕೋರ್ಟ್‌ನ ಹಿರಿಯ ವಕೀಲ ಹಾಗೂ ಪಂಜಾಬ್‌ ವಿಧಾನಸಭೆ ವಿಪಕ್ಷ ಮುಖಂಡ ಎಚ್‌.ಎಸ್‌. ಪೋಲ್ಕ ಅವರು ಹೇಳಿದ್ದಾರೆ ಎಂದು ಎಎನ್‌ಐ ಟ್ವಿಟ್‌ ಮಾಡಿದೆ.

ಘಟನೆ ವಿವರ
‘ಅಮೃತಸರದ ಹೊರವಲಯದಲ್ಲಿರುವ ನಿರಂಕಾರಿ ಭವನದಲ್ಲಿ ಧಾರ್ಮಿಕ ಸಭೆಯ ಕಾರಣಕ್ಕೆ ಭಕ್ತಾದಿಗಳು ಸೇರಿದ್ದರು. ಈ ವೇಳೆ ಇಬ್ಬರು ದುಷ್ಕರ್ಮಿಗಳು ಸಭೆ ನಡೆಯುತ್ತಿದ್ದ ಆವರಣಕ್ಕೆ ಗ್ರೆನೇಡ್ ಎಸೆದಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ನಮಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಈವರೆಗೆ ಯಾರೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ತನಿಖೆ ನಡೆಯುತ್ತಿದೆ. ಹೀಗಾಗಿ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ’ ಎಂದು ಪೊಲೀಸರು ತಿಳಿಸಿದ್ದರು.

ನಿರಂಕಾರಿ ಭವನದಲ್ಲಿದ್ದ ಭಕ್ತರನ್ನು ದಾಳಿ ನಡೆದ ಕಾರಣ ತೆರವು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.