ADVERTISEMENT

ಅಮುಲ್ ಕರ್ನಾಟಕ ಪ್ರವೇಶಿಸುತ್ತಿಲ್ಲ: ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಏಪ್ರಿಲ್ 2023, 2:56 IST
Last Updated 10 ಏಪ್ರಿಲ್ 2023, 2:56 IST
   

ನವದೆಹಲಿ: ಅಮುಲ್‌, ಕರ್ನಾಟಕವನ್ನು ಪ್ರವೇಶಿಸುತ್ತಿಲ್ಲ. ನಂದಿನಿಯನ್ನು ಅಮುಲ್‌ನಲ್ಲಿ ವಿಲೀನಗೊಳಿಸಲಾಗುತ್ತದೆ ಎಂಬುದು ಕಾಂಗ್ರೆಸ್‌ ಮಾಡುತ್ತಿರುವ 'ಸುಳ್ಳು ಮಾಹಿತಿ' ಪ್ರಸಾರ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಆರೋಪಿಸಿದ್ದಾರೆ.

ಅಮುಲ್‌ ಉತ್ಪನ್ನಗಳ ಸರಬರಾಜು ವಿಚಾರವಾಗಿ ಕರ್ನಾಟಕದಲ್ಲಿ ಸೃಷ್ಟಿಯಾಗಿರುವ ವಿವಾದದ ಕುರಿತು ಮಾಳವೀಯ ಸರಣಿ ಟ್ವೀಟ್‌ ಮಾಡಿದ್ದಾರೆ.

'ಅಮುಲ್‌ ಕರ್ನಾಟಕಕ್ಕೆ ಪ್ರವೇಶಿಸುತ್ತಿಲ್ಲ. ಅಮುಲ್‌ ಮತ್ತು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್‌) ಎರಡೂ ತಮ್ಮ ಉತ್ಪನ್ನಗಳನ್ನು ತ್ವರಿತ-ವಾಣಿಜ್ಯ ವೇದಿಕೆಗಳಲ್ಲಿ ಮಾರಾಟ ಮಾಡುತ್ತವೆ. ಕರ್ನಾಟಕದಲ್ಲಿ 2019ರಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಬಳಿಕ, ಕೆಎಂಎಫ್‌ನ ಆದಾಯ ₹ 10,000 ಕೋಟಿಯಷ್ಟು ಹೆಚ್ಚಾಗಿದೆ. 2022ರಲ್ಲಿ ಕೆಎಂಎಫ್‌ ಆದಾಯ ₹ 25,000 ಕೋಟಿಯಷ್ಟಿತ್ತು. ಇದರಲ್ಲಿ ₹ 20,000 ಕೋಟಿ ರೈತರಿಗೆ ವಾಪಸ್‌ ಆಗಿದೆ' ಎಂದು ತಿಳಿಸಿದ್ದಾರೆ.

ADVERTISEMENT

ಮತ್ತೊಂದು ಟ್ವೀಟ್‌ನಲ್ಲಿ, 'ಕಾಂಗ್ರೆಸ್‌ ಅನ್ನು ಭಾರತ ಏಕೆ ನಂಬುವುದಿಲ್ಲ ಎಂಬುದಕ್ಕೆ ಕಾರಣವಿದೆ. ಅವರು ಸುಳ್ಳು ಹೇಳುತ್ತಾರೆ! ನಂದಿನಿ ಉತ್ಪಾದಕ ಕೆಎಂಎಫ್‌ ಅನ್ನು ಅಮುಲ್ ಜೊತೆ ವಿಲೀನಗೊಳಿಸಲಾಗುತ್ತದೆ ಎಂಬುದು ಇತ್ತೀಚಿನದು' ಎಂದು ಕುಟುಕಿದ್ದಾರೆ.

'ಕೆಎಂಎಫ್‌, ದೇಶದ ಎರಡನೇ ದೊಡ್ಡ ಹಾಲು ಉತ್ಪಾದಕ ಒಕ್ಕೂಟ. ಮಹಾರಾಷ್ಟ್ರ, ಗೋವಾ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ಡಿಪೊಗಳನ್ನು ಹೊಂದಿದೆ. ಕೆಎಂಎಫ್‌ನ ಒಟ್ಟಾರೆ ಮಾರಾಟದಲ್ಲಿ ಶೇ 15ರಷ್ಟು ಕರ್ನಾಟಕದ ಹೊರಗಡೆ ನಡೆಯುತ್ತದೆ. ನಂದಿನಿಯನ್ನು ಸಿಂಗಾಪುರ, ಯುಎಇ ಹಾಗೂ ಇತರ ಇನ್ನಷ್ಟು ದೇಶಗಳಿಗೆ ಕಳುಹಿಸಲಾಗುತ್ತಿದೆ. ಅಮುಲ್‌ ಮತ್ತು ನಂದಿನಿ ವಿಲೀನವಾಗುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

'ಬಿಜೆಪಿ ಆಡಳಿತದಲ್ಲಿ ಕರ್ನಾಟಕವು, ಹೆಚ್ಚುವರಿ ಹಾಲು ಉತ್ಪಾದಕ ರಾಜ್ಯವಾಗಿದೆ. ಹೈನುಗಾರಿಕೆಯಲ್ಲಿ ತೊಡಗಿರುವವರು ಉತ್ತಮ ಸಾಧನೆ ಮಾಡುತ್ತಿದ್ದಾರೆ. ನಂದಿನಿ ಬ್ರಾಂಡ್‌ಗಾಗಿ ಮೊಸಳೆ ಕಣ್ಣೀರು ಸುರಿಸುತ್ತಿರುವ ಕಾಂಗ್ರೆಸ್‌, ಗೋ ಹತ್ಯೆ ವಿರೋಧಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ನಮ್ಮ ನಂದಿನಿಯ ಹತ್ಯೆಗೆ ಅನುಮೋದನೆ ನೀಡಿದೆ' ಎಂದು ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.