ನವದೆಹಲಿ: ವಿಶ್ವದಾದ್ಯಂತ ಗಾಯಕರಿಗೆ ಸ್ಫೂರ್ತಿದಾಯಕವಾಗಿದ್ದ ಕಿಶೋರ್ ಕುಮಾರ್, ಅಲ್ಕಾ ಯಾಗ್ನಿಕ್ ಅವರನ್ನೂ ಈ ಬಾರಿಯೂ ‘ಪದ್ಮ ಪ್ರಶಸ್ತಿ’ ಆಯ್ಕೆ ವೇಳೆ ಪರಿಗಣಿಸದಿರುವುದಕ್ಕೆ ಗಾಯಕ ಸೋನು ನಿಗಮ್ ಬೇಸರ ವ್ಯಕ್ತಪಡಿಸಿದ್ದಾರೆ.
‘ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಸಹೋದ್ಯೋಗಿಗಳಾದ ಅಲ್ಕಾ ಯಾಗ್ನಿಕ್, ಶ್ರೇಯಾ ಘೋಷಾಲ್, ಸುನಿಧಿ ಚೌಹಾಣ್ ಅವರಿಗೂ ಪದ್ಮ ಪ್ರಶಸ್ತಿ ನೀಡಿ ಗೌರವಿಸಬೇಕು’ ಎಂದು ಇನ್‌ಸ್ಟಾ ಗ್ರಾಂನಲ್ಲಿ ವಿಡಿಯೊ ಹಂಚಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಭಾರತ ಹಾಗೂ ಪದ್ಮ ಪ್ರಶಸ್ತಿಗೆ ಬಾಕಿ ಉಳಿದವರು’ ಎಂದು ಶೀರ್ಷಿಕೆ ಅಡಿಯಲ್ಲಿ ಮಾಹಿತಿ ಹಾಕಿರುವ ಅವರು, ‘ವಿಶ್ವದಾದ್ಯಂತ ಸಾಕಷ್ಟು ಗಾಯಕರಿಗೆ ಸ್ಫೂರ್ತಿದಾಯಕರಾಗಿರುವ ಮೊಹಮ್ಮದ್ ರಫಿ ಅವರನ್ನು ‘ಪದ್ಮಶ್ರೀ‘ ಪ್ರಶಸ್ತಿಗಷ್ಟೇ ಸೀಮಿತಗೊಳಿಸಲಾಗಿದೆ. ಕಿಶೋರ್ ಕುಮಾರ್ ಅವರಿಗೆ ಅದೂ ಕೂಡ ಸಿಕ್ಕಿಲ್ಲ. ಅವರನ್ನು ಮರಣೋತ್ತರವಾಗಿ ಈ ಪ್ರಶಸ್ತಿಗೆ ಪರಿಗಣಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಮೊಹಮ್ಮದ್ ರಫಿ ಅವರಿಗೆ 1967ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. 1987ರಲ್ಲಿ ಕಿಶೋರ್‌ಕುಮಾರ್ ಮೃತಪಟ್ಟಿದ್ದು, ಇದುವರೆಗೂ ಅವರನ್ನು ಪದ್ಮ ಪ್ರಶಸ್ತಿಗೆ ಪರಿಗಣಿಸಿಲ್ಲ.
2025ರಲ್ಲಿ ಪ್ರಕಟಿಸಲಾದ ಪದ್ಮಪ್ರಶಸ್ತಿಯಲ್ಲಿ ಶಾರದಾ ಸಿನ್ಹಾ, ಪಂಕಜ್ ಉದಾಸ್ ಅವರಿಗೆ ಮರಣೋತ್ತರವಾಗಿ ‘ಪದ್ಮವಿಭೂಷಣ್’ ಹಾಗೂ ‘ಪದ್ಮಭೂಷಣ್’ ಪ್ರಶಸ್ತಿಗೆ ಪರಿಗಣಿಸಲಾಗಿದೆ. ಅರ್ಜಿತ್ ಸಿಂಗ್, ಜಸ್ಪೀಂದರ್ ನರುಲಾ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ಘೋಷಿಸಲಾಗಿದೆ.
ಸೋನು ನಿಗಮ್ ಅವರಿಗೆ 2022ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.