ಜಗನ್ ಮೋಹನ್ ರೆಡ್ಡಿ ಮತ್ತು ಚಂದ್ರಬಾಬು ನಾಯ್ಡು
ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಸರ್ಕಾರ ರೈತರಿಗೆ ಬೆಂಬಲ ಒದಗಿಸುವ 'ರೈತ ಭರವಸೆ' ಯೋಜನೆಯನ್ನು ರದ್ದುಗೊಳಿಸಿದೆ. ಈ ಮೂಲಕ ಚುನಾವಣೆ ಪೂರ್ವ ನೀಡಿದ್ದ ಭರವಸೆಗಳನ್ನೂ ಈಡೇರಿಸದೆ ರೈತರಿಗೆ ದ್ರೋಹ ಬಗೆದಿದೆ ಎಂದು ವೈಎಸ್‌ಆರ್‌ಸಿಪಿ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಆರೋಪಿಸಿದ್ದಾರೆ.
ಚುನಾವಣೆಗೆ ಮುನ್ನ ನಾಯ್ಡು ಘೋಷಿಸಿದ ಭರವಸೆಗಳನ್ನು ಈಡೇರಿಸದೆ, ಕಲ್ಯಾಣ ಯೋಜನೆಗಳನ್ನು ರದ್ದುಪಡಿಸುವ ಮೂಲಕ ರೈತರಿಗೆ ದ್ರೋಹ ಬಗೆದಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ರೆಡ್ಡಿ ಕಿಡಿಕಾರಿದ್ದಾರೆ.
ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನೂ ಮೀರಿ ಪ್ರತಿ ರೈತನಿಗೆ ವಾರ್ಷಿಕವಾಗಿ ₹13,500 ನೀಡಿತ್ತು. ಖಜಾನೆಯಲ್ಲಿ ಹಣ ಇಲ್ಲದಿದ್ದ ವೇಳೆಯೂ ₹34,288 ಕೋಟಿ ರೈತರಿಗೆ ನಮ್ಮ ಸರ್ಕಾರ ಬೆಂಬಲ ಒದಗಿಸಿತ್ತು ಎಂದು ರೆಡ್ಡಿ ಹೇಳಿದ್ದಾರೆ.
ಚುನಾವಣೆ ವೇಳೆ ಈಗಿನ ನಾಯ್ಡು ಸರ್ಕಾರ ಅನ್ನದಾತ ಸುಖೀಭವ ಮತ್ತು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ವಾರ್ಷಿಕವಾಗಿ ₹20,000 ನೀಡುವುದಾಗಿ ಭರವಸೆ ನೀಡಿತ್ತು, ಆದರೆ ಕೇಂದ್ರದ ₹6,000 ಹೊರತುಪಡಿಸಿ ಎರಡು ವರ್ಷಗಳಲ್ಲಿ ಇದುವರೆಗೆ ₹5,000 ಮಾತ್ರ ರೈತರಿಗೆ ನೀಡಿದೆ ಎಂದು ರೆಡ್ಡಿ ಹೇಳಿದ್ದಾರೆ.
ಸರ್ಕಾರ ಸೂಕ್ತ ಬೆಂಬಲ ಒದಗಿಸದ ಕಾರಣ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಪರಿಹಾರವನ್ನೂ ನೀಡಿಲ್ಲ. ಇದು ಇಂದಿನ ಸರ್ಕಾರದ ಅಮಾನವೀಯತೆ ಮತ್ತು ಸಹಾನುಭೂತಿಯ ಕೊರತೆಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.