ಅಮರಾವತಿ: ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ.ಎಸ್. ಜಗನ್ ಮೋಹನ್ ರೆಡ್ಡಿ ವಾಹನಕ್ಕೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಜುಲೈ 1 ರವರೆಗೆ ಪೊಲೀಸರು ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಆಂಧ್ರಪ್ರದೇಶ ಹೈಕೋರ್ಟ್ ಶುಕ್ರವಾರ ನಿರ್ಬಂಧ ಹೇರಿದೆ.
ಟಿಡಿಪಿ ನಾಯಕರು ಮತ್ತು ಪೊಲೀಸರು ಕಿರುಕುಳ ನೀಡುತ್ತಿದ್ದಾರೆಂದು ಒಂದು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಪಕ್ಷದ ನಾಯಕನ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಜೂನ್ 18ರಂದು ರೆಡ್ಡಿ ಪಲ್ನಾಡು ಜಿಲ್ಲೆಯ ರೆಂಟಪಲ್ಲ ಗ್ರಾಮಕ್ಕೆ ಭೇಟಿ ನೀಡಿದ್ದರು.
ಗ್ರಾಮಕ್ಕೆ ತೆರಳುವಾಗ, ವೈಎಸ್‌ಆರ್‌ಸಿಪಿ ಬೆಂಬಲಿಗ ಎಂದು ಹೇಳಲಾದ ಸಿ ಸಿಂಗಯ್ಯ, ರೆಡ್ಡಿ ಪ್ರಯಾಣಿಸುತ್ತಿದ್ದ ವಾಹನದ ಚಕ್ರಗಳ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು, ಬಳಿಕ ಮೃತಪಟ್ಟಿದ್ದರು.
ಸಿಂಗಯ್ಯ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಜಗನ್ ಮತ್ತು ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ತಮ್ಮ ಬಂಧನದ ಸಾಧ್ಯತೆ ಹಿನ್ನೆಲೆಯಲ್ಲಿ ಜಗನ್ ಹೈಕೋರ್ಟ್ ಮೊರೆಹೋಗಿದ್ದರು.
‘ಆಂಧ್ರದ ರಾಜಕಾರಣ ಕೀಳುಮಟ್ಟಕ್ಕೆ’
‘ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ರಾಜಕಾರಣವನ್ನು ಕೀಳುಮಟ್ಟಕ್ಕಿಳಿಸುತ್ತಿದ್ದಾರೆ’ ಎಂದು ವೈಎಸ್‌ಆರ್‌ಸಿಪಿ ವರಿಷ್ಠ ವೈ.ಎಸ್. ಜಗನ್ ಮೋಹನ್ ರೆಡ್ಡಿ ವಾಗ್ದಾಳಿ ನಡೆಸಿದ್ದರು. ಅಲ್ಲದೆ, ತಮ್ಮ ಭೇಟಿಗೆ ನಿರ್ಬಂಧ ಹೇರಿದ್ದನ್ನೂ ಟೀಕಿಸಿದ್ದರು. ವಿರೋಧ ಪಕ್ಷದ ನಾಯಕರು ತಮ್ಮ ಕಾರ್ಯಕರ್ತರು ಅಥವಾ ರೈತರು, ಜನರನ್ನು ಭೇಟಿಯಾಗುವುದನ್ನು ಏಕೆ ತಡೆಯಲಾಗುತ್ತಿದೆ ಎಂದು ಕಿಡಿಕಾರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.