ವೈ.ಎಸ್ ಶರ್ಮಿಳಾ
– ಪಿಟಿಐ ಚಿತ್ರ
ಅಮರಾವತಿ: ಪೊಲೀಸರು ನನ್ನನ್ನು ಗೃಹಬಂಧನದಲ್ಲಿರಿಸಿದ್ದಾರೆ ಎಂದು ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ಬುಧವಾರ ಆರೋಪಿಸಿದ್ದಾರೆ.
‘ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ, ವಿಜಯವಾಡದಲ್ಲಿರುವ ನನ್ನ ವಿಲ್ಲಾದಲ್ಲಿ ನನ್ನನ್ನು ಏಕೆ ಗೃಹ ಬಂಧನದಲ್ಲಿಡಲಾಗಿದೆ?, ಯಾವ ಕಾರಣಕ್ಕೆ ಎಂಬುದನ್ನು ದಯವಿಟ್ಟು ಆಂಧ್ರ ಪ್ರದೇಶದ ಜನರಿಗೆ ತಿಳಿಸಿ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ನಾನು ಪಕ್ಷದ ಕಚೇರಿಗೆ ಹೋಗುವುದು ಅಪರಾಧವೇ?, ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸಲು ನೀವು ಏಕೆ ಪ್ರಯತ್ನಿಸುತ್ತಿದ್ದೀರಿ...’ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ವಿರುದ್ಧ ಶರ್ಮಿಳಾ ವಾಗ್ದಾಳಿ ನಡೆಸಿದ್ದಾರೆ.
‘ನಮ್ಮ ಪಕ್ಷವು ‘ಅಮರಾವತಿ ರಾಜಧಾನಿ’ ಎಂಬ ಸಮಿತಿಯನ್ನು ರಚಿಸಿ ಕೇವಲ 2 ದಿನಗಳಾಗಿದೆ. ಕಾಂಗ್ರೆಸ್ ನಾಯಕರು ಸಮಿತಿಯನ್ನು ರಚಿಸುತ್ತಿದ್ದಾರೆ ಎಂದು ಸರ್ಕಾರ ಹೆದರುತ್ತಿದೆ. ಚಂದ್ರಬಾಬು ನಾಯ್ಡು ಅವರು ಏನನ್ನು ಮರೆಮಾಡಲು ಪ್ರಯತ್ನಿಸುತ್ತಿದ್ದಾರೆ? ಒಬ್ಬ ಮಹಿಳೆ ಮತ್ತು ಕಾರ್ಯಕರ್ತರನ್ನು ತಡೆಯಲು ಇಷ್ಟೊಂದು ಪೊಲೀಸ್ ಸಿಬ್ಬಂದಿ ಯಾಕೆ?, ಮಹಿಳೆಯರ ಮೇಲೆ ಹೆಚ್ಚು ದೌರ್ಜನ್ಯ ನಡೆಯುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರಪ್ರದೇಶ 3ನೇ ಸ್ಥಾನದಲ್ಲಿದೆ. ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದೂ ಶರ್ಮಿಳಾ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.