ADVERTISEMENT

2024ರಲ್ಲಿ ಆಂಧ್ರದಲ್ಲಿ ದೇಶದಲ್ಲೇ ದೊಡ್ಡ ಚುನಾವಣಾ ಅಕ್ರಮ: ಜಗನ್ ರೆಡ್ಡಿ ಆರೋಪ

ಪಿಟಿಐ
Published 13 ಆಗಸ್ಟ್ 2025, 11:35 IST
Last Updated 13 ಆಗಸ್ಟ್ 2025, 11:35 IST
<div class="paragraphs"><p>ವೈ.ಎಸ್. ಜಗನ್ ಮೋಹನ್ ರೆಡ್ಡಿ </p></div>

ವೈ.ಎಸ್. ಜಗನ್ ಮೋಹನ್ ರೆಡ್ಡಿ

   

ಅಮರಾವತಿ: 2024ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ದೇಶದಲ್ಲೇ ದೊಡ್ಡ ಅಕ್ರಮ ಆಂಧ್ರಪ್ರದೇಶದಲ್ಲಿ ನಡೆದಿದೆ ಎಂದು ವೈಎಸ್‌ಆರ್‌ಸಿಪಿ ಮುಖ್ಯಸ್ಥರೂ ಆಗಿರುವ ಮಾಜಿ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಆರೋಪಿಸಿದ್ದಾರೆ. ಅಲ್ಲದೆ ಈ ವಿಷಯದಲ್ಲಿ ರಾಹುಲ್ ಗಾಂಧಿ ಮೌನವಾಗಿದ್ದಾರೆ ಎಂದೂ ಅಸಮಾಧಾನ ವ್ಯಕ್ತ‍ಪಡಿಸಿದ್ದಾರೆ.

ತಡಿಪಲ್ಲಿಯಲ್ಲಿರುವ ವೈಎಸ್ಆರ್‌ಸಿಪಿ ಕೇಂದ್ರ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ 48 ಲಕ್ಷ ಅಥವಾ ಶೇ 12.5ರಷ್ಟು ಪ್ರಮಾಣ ಅಕ್ರಮ ನಡೆದಿದೆ ಎಂದು ಆಪಾದಿಸಿದ್ದಾರೆ.

ADVERTISEMENT

‘ದುರದೃಷ್ಟವಶಾತ್, ಆಂಧ್ರ ಪ್ರದೇಶದ ಚುನಾವಣಾ ಅಕ್ರಮ ಬಗ್ಗೆ ರಾಹುಲ್ ಗಾಂಧಿ ಏಕೆ ಮಾತನಾಡುತ್ತಿಲ್ಲ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜೊತೆ ಉತ್ತಮ ಸಂಬಂಧ ಇರುವುದರಿಂದ ಅವರು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ’ ಎಂದು ಆರೋಪಿಸಿದ್ದಾರೆ.

ಆಂಧ್ರ ಪ್ರದೇಶದಲ್ಲಿ ನಡೆದ ಚುನಾವಣಾ ಅಕ್ರಮ ದೇಶದಲ್ಲೇ ದೊಡ್ಡದು. ಮತದಾನ ಮುಗಿದು ಎಣಿಕೆ ಆರಂಭವಾಗುವ ಹೊತ್ತಿಗೆ, ಮತಗಳಲ್ಲಿನ ಶೇಕಡಾವಾರು ವ್ಯತ್ಯಾಸವು ದೇಶದಲ್ಲೇ ಅತಿ ದೊಡ್ಡದಾಗಿತ್ತು ಎಂದು ಹೇಳಿದ್ದಾರೆ.

ಚಂದ್ರಬಾಬು ನಾಯ್ಡು ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ಮಾಣಿಕಂ ಟಾಗೋರ್ ಅವರನ್ನು ಪ್ರಶ್ನಿಸಿದ ರೆಡ್ಡಿ, ನೀವು ಪ್ರಜಾ‍ಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದೀರಿ ಎಂದು ಹೇಳಿದ್ದಾರೆ.

ಕಣ್ಣಿಗೆ ಕಾಣುವಂತ ಹಲವು ಅಕ್ರಮಗಳಲ್ಲಿ ಚಂದ್ರಬಾಬು ನಾಯ್ಡು ಭಾಗಿಯಾಗಿದ್ದಾರೆ. ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಡುವೆ ಉತ್ತಮ ಸಂಬಂಧ ಇರುವುದರಿಂದ ಟಾಗೋರ್ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಇದಲ್ಲದೆ, ಅಕ್ರಮ ಮದ್ಯದ ಅಂಗಡಿಗಳು, ಪರ್ಮಿಟ್ ಕೊಠಡಿಗಳು ಮತ್ತು ಮರಳು, ಸಿಲಿಕಾ, ಸ್ಫಟಿಕ ಶಿಲೆ ಮತ್ತು ಲ್ಯಾಟರೈಟ್‌ಗಳಲ್ಲಿನ ಹಗರಣಗಳಂತಹ ಅಕ್ರಮಗಳ ಹೊರತಾಗಿಯೂ, ಟಾಗೋರ್ ಮೌನವಾಗಿದ್ದರು ಎಂದು ಅವರು ಹೇಳಿದ್ದಾರೆ.

ಚುನಾವಣಾ ಅಕ್ರಮದ ಬಗ್ಗೆವೈಎಸ್‌ಆರ್‌ಸಿಪಿ ನಾಯಕರ ನಿಯೋಗ ಚುನಾವಣಾ ಆಯೋಗವನ್ನು ಭೇಟಿ ಮಾಡಿತು. ಆಂಧ್ರಪ್ರದೇಶದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಕೈಗೊಳ್ಳುವುದಾಗಿ ಆಯೋಗ ಭರವಸೆ ನೀಡಿದೆ ಎಂದು ರೆಡ್ಡಿ ಹೇಳಿದ್ದಾರೆ,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.