ADVERTISEMENT

ಜಮ್ಮು–ಕಾಶ್ಮೀರದಲ್ಲಿ ಭಾರಿ ಮಳೆ, ಪ್ರವಾಹ; ವೈಷ್ಣೋದೇವಿ ಯಾತ್ರೆ ಸ್ಥಗಿತ

​ಪ್ರಜಾವಾಣಿ ವಾರ್ತೆ
ಪಿಟಿಐ
Published 26 ಆಗಸ್ಟ್ 2025, 15:29 IST
Last Updated 26 ಆಗಸ್ಟ್ 2025, 15:29 IST
ಜಮ್ಮುವಿನಲ್ಲಿ ಭಾರಿ ಮಳೆಯಾಗುತ್ತಿರುವ ಪರಿಣಾಮ ತಾವಿ ನದಿಯಲ್ಲಿ ಪ್ರವಾಹ ಸೃಷ್ಟಿಯಾಗಿದೆ – ಪಿಟಿಐ ಚಿತ್ರ
ಜಮ್ಮುವಿನಲ್ಲಿ ಭಾರಿ ಮಳೆಯಾಗುತ್ತಿರುವ ಪರಿಣಾಮ ತಾವಿ ನದಿಯಲ್ಲಿ ಪ್ರವಾಹ ಸೃಷ್ಟಿಯಾಗಿದೆ – ಪಿಟಿಐ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಮಂಗಳವಾರ ಸಂಭವಿಸಿದ ಭೂಕುಸಿತ ಮತ್ತು ಮೇಘ ಸ್ಫೋಟ ಪ್ರಕರಣಗಳಲ್ಲಿ ಕನಿಷ್ಠ 10 ಮಂದಿ ಸಾವಿಗೀಡಾಗಿ, ಹಲವರು ಗಾಯಗೊಂಡಿದ್ದಾರೆ.

ಮಾತಾ ವೈಷ್ಣೋದೇವಿ ಯಾತ್ರೆ ಸಾಗುವ ರಿಯಾಸಿ ಜಿಲ್ಲೆಯ ಮಾರ್ಗದಲ್ಲಿ ಮಂಗಳವಾರ ಮಧ್ಯಾಹ್ನ ಭೂ ಕುಸಿತ ಸಂಭವಿಸಿದ್ದರಿಂದ ಕನಿಷ್ಠ ಆರು ಸಾವಿಗೀಡಾಗಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಹಲವರು ಅವಶೇಷದಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೊಂದೆಡೆ ದೋಡಾ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಪೋಟದಿಂದಾಗಿ ಕನಿಷ್ಠ ನಾಲ್ವರು ಸಾವಿಗೀಡಾಗಿದ್ದಾರೆ. ಪ್ರವಾಹದ ಅಬ್ಬರಕ್ಕೆ ಹಲವು ಮನೆಗಳಿಗೆ ಹಾನಿಯಾಗಿದೆ.

ADVERTISEMENT

ಆಗಸ್ಟ್‌ 27ರವರೆಗೆ ಜಮ್ಮು ವಿಭಾಗದ ಎತ್ತರದ ಪ್ರದೇಶಗಳಲ್ಲಿ ಮೇಘಸ್ಫೋಟ, ಪ್ರವಾಹ ಸೃಷ್ಟಿ ಮತ್ತು ಭೂ ಕುಸಿತ ಸಂಭವಿಸಲಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಯಾತ್ರೆ ತಾತ್ಕಾಲಿಕ ರದ್ದು: ತ್ರಿಕೂಟದಲ್ಲಿರುವ ಮಾತಾ ವೈಷ್ಣೋದೇವಿ ಸನ್ನಿಧಿಗೆ ಯಾತ್ರಾರ್ಥಿಗಳು ತೆರಳುವ ಕಾತ್ರಾ ಮಾರ್ಗದಲ್ಲಿ ಭೂ ಕುಸಿತ ಉಂಟಾದ ಕಾರಣ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ರಿಯಾಸಿ ಜಿಲ್ಲೆಯ ಪರ್ವತ ಪ್ರದೇಶದ ಅಧಕ್‌ವಾರಿಯ ಇಂದ್ರಪ್ರಸ್ಥ ಭೋಜನಾಲಯ ಬಳಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಭೂ ಕುಸಿತದಿಂದ ಭಾರಿ ಗಾತ್ರದ ಬಂಡೆಗಳು, ಮಣ್ಣಿನ ದಿಬ್ಬ ಮತ್ತು ಮರಗಳು ಉರುಳಿಬಿದ್ದವು. ಕೂಡಲೇ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮುವಿನಲ್ಲಿ ಕಳೆದ ಮೂರು ದಿನಗಳಿಂದ ಸತತ ಮಳೆಯಾಗುತ್ತಿದೆ. ತಾವಿ ಮತ್ತು ರಾವಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಹೀಗಾಗಿ ಕಾತ್ರಾದಲ್ಲಿರುವ ಮಾತಾ ವೈಷ್ಣೋ ದೇವಿ ಯಾತ್ರೆಯನ್ನು ಭಕ್ತರ ಸುರಕ್ಷತೆ ದೃಷ್ಟಿಯಿಂದ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. 

ಕಣಿವೆಯ ಏಕೈಕ ಸರ್ವ ಋತು ರಸ್ತೆಯಾದ ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಶ್ರೀನಗರ–ಲೆಹ್‌ ಹೆದ್ದಾರಿಯಲ್ಲಿ ಭಾರೀ ಹಿಮಪಾತದಿಂದ ಸಂಚಾರ ಸ್ಥಗಿತಗೊಂಡಿದೆ. ಲಡಾಕ್ ಮತ್ತು ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲೂ ಹಿಮಪಾತದ ವರದಿಯಾಗಿದೆ.

ಒಡಿಶಾದಲ್ಲೂ ಪ್ರವಾಹ

ಒಡಿಶಾ ರಾಜ್ಯದಲ್ಲೂ ಭಾರಿ ಮಳೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಮಂಗಳವಾರ ಪ್ರವಾಹ ಪರಿಸ್ಥಿತಿ ಉಂಟಾಗಿದೆ. 170ಕ್ಕೂ ಹೆಚ್ಚು ಹಳ್ಳಿಗಳು ಜಲಾವೃತವಾಗಿವೆ.

ಜಮ್ಮು–ಕಾಶ್ಮೀರದ ಉದಮ್‌ಪುರದಲ್ಲಿ ಮಳೆ ಪ್ರವಾಹಕ್ಕೆ ತಗ್ಗು ಪ್ರದೇಶಗಳ ಮನೆಗಳು ಜಲಾವೃತವಾಗಿದ್ದವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.