ಡಾಕ್ಟರ್, ಸಾಂದರ್ಭಿಕ ಚಿತ್ರ
ಭೋಪಾಲ್: ಇತ್ತೀಚೆಗೆ ದಾಮೋಹ್ ಜಿಲ್ಲೆಯ ಮಿಷನರಿ ಆಸ್ಪತ್ರೆಯಲ್ಲಿ ನಕಲಿ ಹೃದ್ರೋಗ ತಜ್ಞ ಎಂದು ಹೇಳಲಾದ ವ್ಯಕ್ತಿಯಿಂದ ಚಿಕಿತ್ಸೆ ಪಡೆದ 7 ಜನ ಮೃತಪಟ್ಟಿದ್ದ ವರದಿ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಮತ್ತೊಬ್ಬ ಬೋಗಸ್ (ನಕಲಿ) ವೈದ್ಯ ಪತ್ತೆಯಾಗಿರುವ ಘಟನೆ ನಡೆದಿದೆ.
ಬಂಧಿತನನ್ನು ಜಬಲ್ಪುರ್‌ದ 48 ವರ್ಷದ ಶುಭಂ ಅವಸ್ಥಿ ಎಂದು ಗುರುತಿಸಲಾಗಿದೆ.
ವಿಶೇಷವೆಂದರೆ ಶುಭಂ ಅವರು ಆಡಳಿತಾರೂಢ ಬಿಜೆಪಿಯ ಜಬಲ್ಪುರ್ ಘಟಕದ ವೈದ್ಯರ ಮೋರ್ಚಾದ ಸಹ ಸಂಚಾಲಕ ಆಗಿದ್ದರು ಎಂದು ಪಿಟಿಐ ವರದಿ ಮಾಡಿದೆ.
ನಕಲಿ ಆಯುಷ್ ಪ್ರಮಾಣಪತ್ರದಿಂದ ಶುಭಂ ಅವಸ್ಥಿ ಜಬಲ್ಪುರ್ ‘ಗೋವಿಂದ್ ದಾಸ್ ಜಿಲ್ಲಾ ಆಸ್ಪತ್ರೆ’ಯಲ್ಲಿ ಕೆಲಸ ಗಿಟ್ಟಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಶುಭಂ ಅವಸ್ಥಿಯನ್ನು ಈ ಹಿಂದೆಯೇ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಮಧ್ಯಪ್ರದೇಶದ ಬಿಜೆಪಿ ವೈದ್ಯರ ಮೋರ್ಚಾದ ಅಧ್ಯಕ್ಷರು ತಿಳಿಸಿದ್ದಾರೆ.
ಗೋವಿಂದ್ ದಾಸ್ ಜಿಲ್ಲಾ ಆಸ್ಪತ್ರೆಯಲ್ಲಿ ಇತ್ತೀಚೆಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಮೃತನ ಸ್ನೇಹಿತ ಶೈಲೇಂದ್ರ ಬಾರಿ ಎನ್ನುವರು, ‘ಆಸ್ಪತ್ರೆಯಲ್ಲಿ ನಕಲಿ ವೈದ್ಯರಿದ್ದಾರೆ’ ಎಂಬ ಗುಮಾನಿ ಮೇಲೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಅಷ್ಟಾದರೂ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿರಲಿಲ್ಲ. ನಂತರ ಶೈಲೇಂದ್ರ ಅವರು ಕೋರ್ಟ್ ಮೊರೆ ಹೋದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಮಿಷನರಿ ಆಸ್ಪತ್ರೆಯೊಂದರಲ್ಲಿ 7 ಜನರ ಸಾವಿಗೆ ಕಾರಣ ಎಂದು ಹೇಳಲಾಗಿದ್ದ ನಕಲಿ ವೈದ್ಯರೊಬ್ಬರು ಇತ್ತೀಚೆಗೆ ಪತ್ತೆಯಾಗಿದ್ದರು. ನರೇಂದ್ರ ವಿಕ್ರಮಾದಿತ್ಯ ಯಾದವ್, ಎನ್ನುವರು ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ 'ಡಾ. ಎನ್. ಜಾನ್ ಕ್ಯಾಮ್' ಎಂಬ ನಕಲಿ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದದ್ದು ಸಂಚಲನ ಸೃಷ್ಟಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.