ADVERTISEMENT

ಕೃಷಿ ಕಾಯ್ದೆ ರದ್ದು ಮಾಡಿ ಕಡೆ ಆಶಯ ಈಡೇರಿಸಿ: ಪತ್ರ ಬರೆದಿಟ್ಟು ರೈತ ಆತ್ಮಹತ್ಯೆ

ದೆಹಲಿ ಗಡಿಯಲ್ಲಿ ಮುಂದುವರೆದ ರೈತರ ಆತ್ಮಹತ್ಯೆ

ಪಿಟಿಐ
Published 8 ಮಾರ್ಚ್ 2021, 2:43 IST
Last Updated 8 ಮಾರ್ಚ್ 2021, 2:43 IST
ಟಿಕ್ರಿ ಗಡಿಯಲ್ಲಿ ನಡೆಯುತ್ತಿರುವ ಹೋರಾಟದ ವೇಳೆ ಕಂಡ ದೃಶ್ಯ (ಪಿಟಿಐ)
ಟಿಕ್ರಿ ಗಡಿಯಲ್ಲಿ ನಡೆಯುತ್ತಿರುವ ಹೋರಾಟದ ವೇಳೆ ಕಂಡ ದೃಶ್ಯ (ಪಿಟಿಐ)   

ಚಂಡೀಗಢ: ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ನಡೆಯುತ್ತಿರುವ ಟಿಕ್ರಿ ಗಡಿಗೆ ಸ್ವಲ್ಪ ದೂರದಲ್ಲಿ ರೈತರೊಬ್ಬರು ಭಾನುವಾರ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನಾ ಸ್ಥಳದಿಂದ 7 ಕಿ.ಮೀ ದೂರದಲ್ಲಿ ಘಟನೆ ನಡೆದಿದೆ. ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದ ಹರಿಯಾಣದ ಹಿಸಾರ್‌ ಜಿಲ್ಲೆಯ ರೈತ ರಾಜ್‌ವೀರ್‌, ಆತ್ಮಹತ್ಯೆ ಪತ್ರವನ್ನು ಬರೆದಿಟ್ಟಿದ್ದಾರೆ ಎಂದು ಬಹದ್ದೂರ್‌ಗಢ್‌ ಪೊಲೀಸ್‌ ಠಾಣೆ ಅಧಿಕಾರಿ ವಿಜಯ್‌ ಕುಮಾರ್‌ ಅವರು ಮಾಹಿತಿ ನೀಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ತನ್ನ ನಿರ್ಧಾರಕ್ಕೆ ಕೇಂದ್ರದ ಮೂರು ಕೃಷಿ ಕಾನೂನುಗಳೇ ಕಾರಣ ಎಂದು ರೈತ ಪತ್ರದಲ್ಲಿ ಬರೆದಿದ್ದಾರೆ. ಅಲ್ಲದೆ, ಮೂರೂ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ಕೇಂದ್ರ ತನ್ನ ಕೊನೆಯ ಆಶಯವನ್ನು ಈಡೇರಿಸಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.

ADVERTISEMENT

ಆತ್ಮಹತ್ಯೆಗಳ ಸರಣಿ

ಇದಕ್ಕೂ ಮೊದಲು ಟಿಕ್ರಿ ಗಡಿಯಲ್ಲೇ ಹರಿಯಾಣ ಮೂಲದ ರೈತರೊಬ್ಬರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಹೋರಾಟವನ್ನು ಬೆಂಬಲಿಸುತ್ತಿದ್ದ ವಕೀಲರೊಬ್ಬರು ಟಿಕ್ರಿ ಗಡಿಗೆ ಎರಡು ಕಿಲೋಮೀಟರ್‌ ದೂರದಲ್ಲಿ ವಿಷ ಸೇವಿಸಿ ಪ್ರಾಣಬಿಟ್ಟಿದ್ದರು.

'ರೈತರ ಕಷ್ಟಗಳನ್ನು ನೋಡಲಾಗುತ್ತಿಲ್ಲ,' ಎಂದು ಹೇಳಿ ಸಿಖ್‌ ಧರ್ಮಗುರುವೊಬ್ಬರು ಪ್ರತಿಭಟನಾ ಸ್ಥಳದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರು.

ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ರೈತರು ದೆಹಲಿ ಹೊರ ವಲಯದಲ್ಲಿ ಕಳೆದ ವರ್ಷ ನವೆಂಬರ್‌ನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಲ್ಲಿ ಸಾವಿರಾರು ರೈತರು ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.