ADVERTISEMENT

ದೇಶದ್ರೋಹದ ‘ಟ್ರೋಲ್‌’: ಮಹುವಾ ಆಕ್ರೋಶ

ಕಾನೂನುಬಾಹಿರ ಚಟುವಟಿಕೆ ತಡೆ ತಿದ್ದುಪಡಿ ಮಸೂದೆಗೆ ಕಾಂಗ್ರೆಸ್‌, ಟಿಎಂಸಿ ವಿರೋಧ

ಪಿಟಿಐ
Published 24 ಜುಲೈ 2019, 19:45 IST
Last Updated 24 ಜುಲೈ 2019, 19:45 IST
ಮಹುವಾ ಮೊಯಿತ್ರಾ ಮಾತು
ಮಹುವಾ ಮೊಯಿತ್ರಾ ಮಾತು   

ನವದೆಹಲಿ : ‘ಸರ್ಕಾರವು ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆಗೆ ತರಲು ಉದ್ದೇಶಿಸಿದ ತಿದ್ದುಪಡಿಯು ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕವಾದುದು’ ಎಂದು ವಿರೋಧಪಕ್ಷಗಳು ಲೋಕಸಭೆಯಲ್ಲಿ ಬುಧವಾರ ಆತಂಕ ವ್ಯಕ್ತಪಡಿಸಿವೆ.

‘ಉದ್ದೇಶಿತ ತಿದ್ದುಪಡಿಯು, ಪೊಲೀಸ್‌ ಇಲಾಖೆ ಅಥವಾ ಸಂಬಂಧಪಟ್ಟ ತನಿಖಾ ಸಂಸ್ಥೆಯ ಪರವಾನಗಿ ಪಡೆಯದೆಯೇ ಯಾವ ರಾಜ್ಯದೊಳಗೆ ಬೇಕಾದರೂ ಹೋಗಿ ಭಯೋತ್ಪಾದನೆ ವಿರೋಧಿ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುವ ಅಧಿಕಾರವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ನೀಡುತ್ತದೆ. ಇದು ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕ’ ಎಂದು ಟಿಎಂಸಿ ಸದಸ್ಯೆ ಮಹುವಾ ಮೊಯಿತ್ರಾ ವಾದಿಸಿದರು.

‘ಎನ್‌ಐಎ ಮೇಲೆಯೇ ಈಚೆಗೆ ಸಂದೇಹಗಳು ಹುಟ್ಟಿಕೊಂಡಿವೆ. ರಾಜಕೀಯ ದ್ವೇಷ ಸಾಧನೆಗಾಗಿ ಈ ಸಂಸ್ಥೆಯ ಬಳಕೆಯಾಗುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿದೆ. ಮಸೂದೆಯಲ್ಲಿ ಉಲ್ಲೇಖಿಸಲಾದ ಅನೇಕ ವಿಚಾರಗಳು ಜನವಿರೋಧಿ ಮತ್ತು ಸಂವಿಧಾನ ವಿರೋಧಿಯಾಗಿವೆ. ಸರ್ಕಾರದ ವಿರುದ್ಧ ಮಾತನಾಡಿದವರನ್ನು ‘ದೇಶದ್ರೋಹಿಗಳು’ ಎಂದು ಬಿಂಬಿಸುವ ವಾತಾವರಣ ಇದೆ. ರಾಷ್ಟ್ರೀಯ ಸುರಕ್ಷತೆಯ ವಿಚಾರದಲ್ಲಿ ಸರ್ಕಾರದ ತೀರ್ಮಾನಗಳಿಗೆ ವಿರೋಧ ವ್ಯಕ್ತಪಡಿಸಿದಾಗಲೆಲ್ಲಾ ‘ಟ್ರೋಲ್‌ ಸೇನೆ’ ನಮ್ಮನ್ನು ರಾಷ್ಟ್ರವಿರೋಧಿಗಳೆಂದು ಘೋಷಿಸುವ ಪ್ರಚಾರಾಂದೋಲನ ನಡೆಸುತ್ತದೆ’ ಎಂದರು.

ADVERTISEMENT

‘ಯಾವುದೇ ಕಾನೂನುಬದ್ಧ ಪ್ರಕ್ರಿಯೆಯನ್ನು ಅನುಸರಿಸದೆ, ವ್ಯಕ್ತಿಯೊಬ್ಬನನ್ನು ‘ಭಯೋತ್ಪಾದಕ’ ಎಂದು ಘೋಷಿಸುವುದು ಸಹಜ ನ್ಯಾಯಕ್ಕೆ ವಿರುದ್ಧವಾದುದು’ ಎಂದು ವಾದಿಸಿದರು.

ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ, ‘ನಮ್ಮದು ಒಕ್ಕೂಟ ವ್ಯವಸ್ಥೆಯಾಗಿರುವುದರಿಂದ ಇಂಥ ಕಾನೂನುಗಳನ್ನು ರಚಿಸುವಾಗ ಅಥವಾ ತಿದ್ದುಪಡಿ ಮಾಡುವಾಗ ರಾಜ್ಯಗಳ ಸಲಹೆ ಪಡೆಯುವುದು ಅಗತ್ಯ. ಯಾವತ್ತೂ ಕಾನೂನಿನ ದುರ್ಬಳಕೆ ಆಗಬಾರದು ಮತ್ತು ಅಮಾಯಕರಿಗೆ ಕಿರುಕುಳ ನೀಡಬಾರದು’ ಎಂದರು.

‘ಪೊಟಾ, ಟಾಡಾ ಕಾಯ್ದೆಗಳು ವ್ಯಾಪಕವಾಗಿ ದುರ್ಬಳಕೆ ಆದ್ದರಿಂದ ಅವುಗಳನ್ನು ರದ್ದುಪಡಿಸಲಾಯಿತು’ ಎಂದು ಬಿಎಸ್‌ಪಿ ನಾಯಕ ಡ್ಯಾನಿಶ್‌ ಅಲಿ ಹೇಳಿದರು. ಕಾಂಗ್ರೆಸ್‌, ಟಿಆರ್‌ಎಸ್‌ ಮುಂತಾದ ಪಕ್ಷಗಳ ಪ್ರತಿನಿಧಿಗಳು ಸಹ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದವು.

ಕಾಂಗ್ರೆಸ್‌ ಹೊಣೆ

‘ಕಾನೂನುವಿರೋಧಿ ಚಟುವಟಿಕೆ (ತಡೆ) ಕಾಯ್ದೆಯ ಹುಟ್ಟಿಗೆ ಕಾಂಗ್ರೆಸ್‌ ಪಕ್ಷವೇ ಕಾರಣ’ ಎಂದು ಎಐಎಂಐಎಂ ಪಕ್ಷ ಮುಖಂಡ ಅಸಾದುದ್ದೀನ್‌ ಒವೈಸಿ ಆರೋಪಿಸಿದರು.

ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಮಾತನಾಡಿದ ಅವರು, ‘ಈ ಕಾನೂನಿನಿಂದ ಅನೇಕ ನಿರಪರಾಧಿಗಳು ಶಿಕ್ಷೆ ಅನುಭವಿಸುವಂತಾಗಿದೆ. ಇದರ ಬಲಿಪಶುಗಳಲ್ಲಿ ನಾನೂ ಒಬ್ಬ. ಕಾಂಗ್ರೆಸ್‌ ಪಕ್ಷದ ನಾಯಕರು ಕೆಲವು ತಿಂಗಳ ಕಾಲ ಜೈಲಿನಲ್ಲಿ ಉಳಿಯುವಂತಾದರೆ ತಾವು ಮಾಡಿದ ತಪ್ಪೇನು ಎಂಬುದು ಅವರಿಗೆ ಮನವರಿಕೆಯಾದೀತು. ಈ ಕಾನೂನನ್ನು ಜಾರಿ ಮಾಡಿದ ಪೂರ್ಣ ಹೊಣೆಯನ್ನು ಕಾಂಗ್ರೆಸ್‌ ಮೇಲೆಯೇ ಹೊರಿಸುತ್ತೇನೆ. ಕಾಂಗ್ರೆಸ್‌ನವರು ವಿರೋಧ ಪಕ್ಷದಲ್ಲಿದ್ದಾಗ ಮುಸ್ಲಿಮರ ಸಹೋದರರಾಗುತ್ತಾರೆ, ಅಧಿಕಾರಕ್ಕೆ ಬಂದಾಗ ಬಿಜೆಪಿಯವರಿಗಿಂತ ದೊಡ್ಡವರಾಗುತ್ತಾರೆ’ ಎಂದು ಒವೈಸಿ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.