ADVERTISEMENT

ಭಯೋತ್ಪಾದನಾ ನಿಗ್ರಹ ಮಸೂದೆ ತಿದ್ದುಪಡಿಗೆ ರಾಜ್ಯಸಭೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 9:35 IST
Last Updated 2 ಆಗಸ್ಟ್ 2019, 9:35 IST
   

ನವದೆಹಲಿ: ಭಯೋತ್ಪಾದನವಿರೋಧಿ ಮಸೂದೆಗೆ(ತಿದ್ದುಪಡಿ) ಶುಕ್ರವಾರ ರಾಜ್ಯಸಭೆಯ ಅನುಮೋದನೆ ದೊರೆತಿದೆ.ಈ ತಿದ್ದುಪಡಿಯ ನಂತರ ಭಯೋತ್ಪಾದನ ಸಂಘಟನೆಯೊಂದಿಗೆ ನಂಟು ಹೊಂದಿರುವಯಾವುದೇ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸಿ ಅವನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಸಿಕ್ಕಿದೆ.

ಕಾನೂನು ಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯ್ದೆಗೆ (1967) ತಿದ್ದುಪಡಿ ಕೋರುವ ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಮಸೂದೆಗೆ (2019) ಲೋಕಸಭೆಯು ಜುಲೈ 24ರಂದು ಅನುಮೋದನೆ ನೀಡಿತ್ತು. ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿದಾಗ ಪ್ರತಿಪಕ್ಷಗಳು ಸಂಸದೀಯ ಸಮಿತಿಯ ಮರುಪರಿಶೀಲನೆ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದವು. ಪ್ರತಿಪಕ್ಷಗಳು ಮಂಡಿಸಿದ್ದ ನಿಲುವಳಿಗೆ ಬಹುಮತ ಸಿಗದ ಕಾರಣರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ದೊರೆಯಿತು.

ADVERTISEMENT

ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಗೃಹ ಸಚಿವ ಅಮಿತ್‌ ಶಾ, ಈ ಕಾಯ್ದೆಯಲ್ಲಿ ಒಟ್ಟು ನಾಲ್ಕು ಹಂತದ ಪರಿಶೀಲನೆ ನಡೆಯುತ್ತದೆ. ಮಾನವ ಹಕ್ಕುಗಳ ಉಲ್ಲಂಘನೆಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.

ಕೇವಲ ಭಯೋತ್ಪಾದಕ ಸಂಘಟನೆಗಳನ್ನು ಗುರುತಿಸಿದರೆ ಸಾಲದು. ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಗುರುತಿಸಿ, ಹೆಸರಿಸುವ ಅಗತ್ಯವಿದೆ. ಏಕೆಂದರೆ ಒಮ್ಮೆ ಒಂದು ಸಂಘಟನೆಯನ್ನು ನಿಷೇಧಿಸಿದರೆ ಅದೇ ವ್ಯಕ್ತಿಗಳು ಇತರ ಸಂಘಟನೆಗಳ ಅಡಿಯಲ್ಲಿ ಕಾರ್ಯನಿರ್ವಹಿಸಿದ ಹಲವು ದೃಷ್ಟಾಂತಗಳಿವೆ.

ಭಯೋತ್ಪಾದನಾ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ, ಪ್ರೋತ್ಸಾಹಿಸಿದರೆ ಅಥವಾ ಸಿದ್ಧತೆಗೆ ಸಹಕರಿಸಿದರೆ ಅಂಥ ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಘೋಷಿಸಬಹುದಾಗಿದೆ.

ಭಯೋತ್ಪಾದನೆಗೆ ಯಾವುದೇ ಧರ್ಮ ಇಲ್ಲ. ಭಯೋತ್ಪಾದಕರು ಮಾನವೀಯತೆಯ ವಿರುದ್ಧ ಇರುವವರು. ಭಯೋತ್ಪಾದನೆಯ ವಿರುದ್ಧ ಕಠಿಣ ಕಾನೂನು ಜಾರಿ ಮಾಡಲು ಎಲ್ಲ ಪಕ್ಷಗಳೂ ಸಹಕರಿಸಬೇಕು ಎಂದು ಶಾ ಕೋರಿದರು.ಈ ತಿದ್ದುಪಡಿಯಿಂದ ಭಯೋತ್ಪಾದನಾ ಪ್ರಕರಣಗಳ ವಿಚಾರಣೆಯೂ ತ್ವರಿತವಾಗಿ ನಡೆಯಲಿದೆ ಎಂದು ಶಾ ಅಭಿಪ್ರಾಯಪಟ್ಟರು.

ಈ ಕಾಯ್ದೆಯಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಬಹುದು ಎಂಬ ಪ್ರತಿಪಕ್ಷಗಳ ಆತಂಕಕ್ಕೆ ಪ್ರತಿಕ್ರಿಯಿಸಿದ ಅವರು, ನಾಲ್ಕು ಹಂತಗಳಲ್ಲಿ ಪರಿಶೀಲನೆ ನಡೆಯುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲ ಎಂದು ಭರವಸೆ ನೀಡಿದರು. ವ್ಯಕ್ತಿಯೊಬ್ಬನನ್ನು ಭಯೋತ್ಪಾದಕ ಎಂದು ಘೋಷಿಸಿದ ನಂತರವೂ ಮೇಲ್ಮನವಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ರಾಷ್ಟ್ರೀಯ ತನಿಖಾ ದಳದ (National Investigation Agency – NIA) ಕಾರ್ಯಕ್ಷಮತೆಯನ್ನು ವಿವರಿಸಿದ ಅವರು, ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆಈವರೆಗೆ 278 ಪ್ರಕರಣಗಳನ್ನು ದಾಖಲಿಸಲಾಗಿದೆ. 204 ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. 54 ಪ್ರಕರಣಗಳಲ್ಲಿ ತೀರ್ಪು ಹೊರಬಿದ್ದಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.